ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ 15 ದಿನಗಳೊಳಗೆ ಸಮಿತಿ ಮುಂದೆ ಹಾಜರಿ ಕಡ್ಡಾಯ-ಸಂಸದೀಯ ಸಮಿತಿ
ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ ಹಾಗೂ ಇತರ ಕಂಪನಿಯ ಉನ್ನತ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಲು ನಿರಾಕರಿಸಿದ್ದಕ್ಕೆ ಸಂಸತ್ ಸಮಿತಿ ಮತ್ತೆ ಎಚ್ಚರಿಕೆ ರವಾನಿಸಿದ್ದು 15 ದಿನಗಳ ಒಳಗಾಗಿ ಸಮಿತಿ ಮುಂದೆ ಹಾಜರಾಗಲೇಬೇಕೆಂದು ಕಟ್ಟಪ್ಪಣೆ ವಿಧಿಸಿದೆ.
ನವದೆಹಲಿ: ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ ಹಾಗೂ ಇತರ ಕಂಪನಿಯ ಉನ್ನತ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಲು ನಿರಾಕರಿಸಿದ್ದಕ್ಕೆ ಸಂಸತ್ ಸಮಿತಿ ಮತ್ತೆ ಎಚ್ಚರಿಕೆ ರವಾನಿಸಿದ್ದು 15 ದಿನಗಳ ಒಳಗಾಗಿ ಸಮಿತಿ ಮುಂದೆ ಹಾಜರಾಗಲೇಬೇಕೆಂದು ಕಟ್ಟಪ್ಪಣೆ ವಿಧಿಸಿದೆ.ಅಲ್ಲದೆ ಹಿರಿಯ ಅಥವಾ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿಯವರು ಸಭೆಗೆ ಹಾಜರಾಗದ ಹೊರತು ಇನ್ನ್ಯಾವುದೇ ಅಧಿಕಾರಿಗಳನ್ನು ಭೇಟಿ ಮಾಡಲು ಸಮಿತಿ ನಿರಾಕರಿಸಿದೆ ಎನ್ನಲಾಗಿದೆ.
ಇತ್ತೀಚಿಗೆ ಸೋಶಿಯಲ್ ಮಿಡಿಯಾ ವೇದಿಕೆಗಳಲ್ಲಿ ನಾಗರಿಕರ ಹಕ್ಕು ರಕ್ಷಣೆ ವಿಚಾರವಾಗಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಸಂಸದೀಯ ಸಮಿತಿ ಟ್ವಿಟ್ಟರ್ ಗೆ ಸಮನ್ಸ್ ಜಾರಿ ಮಾಡಿತ್ತು. ಫೆಬ್ರುವರಿ 1ರಂದು ಬರೆದ ಈ ಅಧಿಕೃತ ಪತ್ರದ ಅನ್ವಯ ಫೆ.7ರಂದು ಮೀಟಿಂಗ್ ನಿಗಧಿಪಡಿಸಲಾಗಿತ್ತು, ಅದು ಸಾಧ್ಯವಾಗದೆ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ ಮತ್ತು ಇತರ ಅಧಿಕಾರಿಗಳಿಗೆ ಹಾಜರಾಗಲು ಫೆ.11ಕ್ಕೆ ಸಭೆಯನ್ನು ನಿಗಧಿಪಡಿಸಲಾಗಿದೆ.ಆದರೆ ಈಗ 10 ದಿನಗಳ ಕಾಲಾವಕಾಶವನ್ನು ನೀಡಿದರೂ ಸಹಿತ ಸಮಿತಿ ಮುಂದೆ ಹಾಜರಾಗಲು ಟ್ವಿಟ್ಟರ್ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಈಗ ಸಂಸದೀಯ ಸಮಿತಿ ಇನ್ನು15 ದಿನಗಳ ಒಳಗೆ ಹಾಜಾರಾಗಲೇ ಬೇಕೆಂದು ಆದೇಶ ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಖಾಸಗಿ ಡಾಟಾ ಹಾಗೂ ಚುನಾವಣಾ ಮಧ್ಯಸ್ಥಿಕೆ ವಿಚಾರವಾಗಿ ಸಾರ್ವಜನಿಕವಾಗಿ ಕಳವಳ ಹೆಚ್ಚಿದ ಕಾರಣ ಸಂಸತ್ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದ ಪ್ರಮುಖ ಕಂಪನಿಗಳ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರಲು ಸಂಸತ್ ನಿರ್ಧರಿಸಿತ್ತು ಎನ್ನಲಾಗಿದೆ.