ನವದೆಹಲಿ: ಕಳೆದ ಎರಡು ದಿನಗಳ ಹಿಂದೆಯಷ್ಟೇ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 20 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಬಳಿಕ ಬುಧವಾರ ಮೊದಲ ಸುತ್ತಿನ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ MSME ಕ್ಷೇತ್ರಕ್ಕಾಗಿ ಮಹತ್ವದ ಘೋಷಣೆಗಳನ್ನು ಮಾಡಿದ್ದರು. ಗುರುವಾರ ಎರಡನೇ ಸುತ್ತಿನ ಸುದ್ದಿಗೋಷ್ಠಿ ನಡೆಸಿರುವ ಸಿತಾರಾಮನ್, ಬಡವರು, ಕಾರ್ಮಿಕರು ಹಾಗೂ ರೈತರಿಗೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಈ ವೇಳೆ ವಲಸೆ ಕಾರ್ಮಿಕರಿಗಾಗಿ ಮುಂದಿನ ಎರಡು ತಿಂಗಳುಗಳ ಅವಧಿಗೆ ಉಚಿತ ಆಹಾರ ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಪಡಿತರ ಚೀಟಿ ಇಲ್ಲದೆ ಇರುವವರಿಗೂ ಕೂಡ ಸಿಗಲಿದೆ ಪಡಿತರ
ಈ ಕುರಿತು ಘೋಷಣೆಯನ್ನು ಮಾಡಿರುವ ವಿತ್ತ ಸಚಿವರು, ಪಡಿತರ ಚೀಟಿ ಹೊಂದಿರದ ವಲಸೆ ಕಾರ್ಮಿಕರೂ ಕೂಡ ಮುಂದಿನ ಎರಡು ತಿಂಗಳುಗಳ ಅವಧಿಗೆ ಪ್ರತಿ ತಿಂಗಳು 5 ಕೆ.ಜಿ ಗೋದಿ ಅಥವಾ ಅಕ್ಕಿ ಮತ್ತು 1 ಕೆ.ಜಿ ಬೆಳೆ ನೀಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ದೇಶಾದ್ಯಂತ ಇರುವ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಲಾಭ ಸಿಗಲಿದೆ. ಇದಕ್ಕಾಗಿ ಎಲ್ಲಾ ರಾಜ್ಯಗಳು ಸೇರಿದಂತೆ 3500 ಕೋಟಿ ರೂ. ನೀಡಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.



ಶೀಘ್ರದಲ್ಲಿಯೇ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರಲಾಗುವುದು
ಇದಲ್ಲದೆ ದೇಶಾದ್ಯಂತ ಇರುವ ಪಡಿತರ ಚೀಟಿ ಧಾರಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿರುವ ವಿತ್ತ ಸಚಿವೆ, ಶೀಘ್ರದಲ್ಲಿಯೇ ದೇಶಾದ್ಯಂತ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದರಿಂದ ನೀವು ನಿಮ್ಮ ಪಡಿತರ ಚೀಟಿಯನ್ನು ಯಾವುದೇ ದೇಶದ ಯಾವುದೇ ಮೂಲೆಯಲ್ಲಿನ ಪಡಿತರ ಅಂಗಡಿಗಳಲ್ಲಿ ತೋರಿಸುವ ಮೂಲಕ ನಿಮ್ಮ ಪಾಲಿನ ಪಡಿತರವನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. ಆಗಸ್ಟ್ 2020ರವರೆಗೆ ಈ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.