15 ವರ್ಷಗಳ ಬಳಿಕ ಜಾರ್ಖಂಡ್ನಲ್ಲಿ ಇಬ್ಬರು ಮಹಿಳಾ ಸಂಸದರ ಆಯ್ಕೆ
ಸಿಂಗಭೂಮ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಕೋಡಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಿಲುವಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ರಾಂಚಿ: ಬರೋಬ್ಬರಿ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಾರ್ಖಂಡ್ ರಾಜ್ಯದಲ್ಲಿ ಇಬ್ಬರು ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಇಬ್ಬರೂ ಮಹಿಳೆಯರು ಸಹ ರಾಜಕೀಯ ಘಟಾನುಘಟಿಗಳ ವಿರುದ್ಧ ಜಯ ಸಾಧಿಸಿದ್ದಾರೆ.
ಜಾರ್ಖಂಡ್ ನ ಕೋಡರ್ಮ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನ್ನಪೂರ್ಣ ದೇವಿ ಅವರು ಮಾಜಿ ಮುಖ್ಯಮಂತ್ರಿ ಮತ್ತು ಜೆ.ವಿ.ಎಂ-ಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಅಂತೆಯೇ ಸಿಂಗಭೂಮ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಕೋಡಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಿಲುವಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಅನ್ನಪೂರ್ಣ ದೇವಿ ಅವರು ಕೋಡರ್ಮಾ ಕ್ಷೇತ್ರದಲ್ಲಿ ಮರಾಂಡಿ ಅವರನ್ನು 4,47,099 ಮತಗಳ ಅಂತರದಿಂದ ಸೋಲಿಸಿದ್ದಾರೆ. ಒಟ್ಟು 12,08,254 ಮತಗಳಲ್ಲಿ, ಅನ್ನಪೂರ್ಣಕ್ಕೆ 7,51,996 ಮತಗಳನ್ನು ಗಳಿಸಿ ಜಯಗಳಿಸಿದ್ದು, ಮರಾಂಡಿ 2,97,232 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಈ ಹಿಂದೆ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ರಾಜ್ಯಾಧ್ಯಕ್ಷೆ ಆಗಿದ್ದ ಅನ್ನಪೂರ್ಣ ಅವರು, ಲೋಕಸಭಾ ಚುನಾವಣೆ ಪ್ರಕಟವಾದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮತ್ತೊಂದೆಡೆ, ಸಿಂಗಭೂಮ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಕೋಡಾ ಅವರು ಒಟ್ಟು 8,76,613 ಮತಗಳಲ್ಲಿ 4,30,900 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಿಲುವಾ 3,58,055 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಗೀತಾ ಕೋಡಾ ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.