ಮಹಾರಾಷ್ಟ್ರ: ಇಂದು ಬಹುಮತ ಸಾಬೀತು ಪಡಿಸಲಿರುವ ಸಿಎಂ ಉದ್ಧವ್ ಠಾಕ್ರೆ
ಶನಿವಾರ ಮಧ್ಯಾಹ್ನ 2 ಗಂಟೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೆ. ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಸಭೆ ಕರೆಯಲಾಗಿದೆ.
ಮುಂಬೈ: ಬಿಜೆಪಿಯೊಂದಿಗಿನ ಒಪ್ಪಂದ ಮುರಿದು, ಎನ್‌ಸಿಪಿ-ಕಾಂಗ್ರೆಸ್ ಜೊತೆಗಿನ ಮೈತ್ರಿ ಬಳಿಕ ಸಾಕಷ್ಟು ಉತ್ಸಾಹದಿಂದ ಸರ್ಕಾರವನ್ನು ರಚಿಸುವ ಶಿವಸೇನೆ ಇಂದು ಮತ್ತೊಂದು ಪರೀಕ್ಷೆಯನ್ನು ಎದುರಿಸಲು ಸಜ್ಜಾಗಿದೆ. ಉದ್ಧವ್ ಠಾಕ್ರೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಅವರು ಇನ್ನೂ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತುಪಡಿಸಲು ಹಾಗೂ ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಸಭೆ ಕರೆಯಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav thackeray) ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಲಿದ್ದಾರೆ.
ಪ್ರಸ್ತುತ ಶಿವಸೇನೆ(Shiv Sena)ಯ 56 ಶಾಸಕರು, ಎನ್‌ಸಿಪಿ(NCP) 54 ಮತ್ತು ಕಾಂಗ್ರೆಸ್(Congress) 44 ಶಾಸಕರ ಬೆಂಬಲ ಹೊಂದಿರುವುದರಿಂದ ಉದ್ಧವ್ ಠಾಕ್ರೆ ಸರ್ಕಾರ ಬಹುಮತವನ್ನು ಸುಲಭವಾಗಿ ಸಾಬೀತುಪಡಿಸುತ್ತದೆ ಎಂದು ನಂಬಲಾಗಿದೆ. ಮಹಾರಾಷ್ಟ್ರ ಸರ್ಕಾರದ ಬಹುಮತಕ್ಕೆ 145 ಶಾಸಕರ ಬೆಂಬಲ ಬೇಕು ಮತ್ತು ಅಘಾಡಿಯಲ್ಲಿ 154 ಶಾಸಕರು ಇರುವುದರಿಂದ ಬಹುಮತವನ್ನು ಸುಲಭವಾಗಿ ಸಾಬೀತುಪಡಿಸಬಹುದಾಗಿದೆ. ನಂತರ ಭಾನುವಾರ ವಿಧಾನಸಭೆಯ ಸ್ಪೀಕರ್ ಆಯ್ಕೆ ಮಾಡಲಾಗುವುದು ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ. ಇದಲ್ಲದೆ ಅಂದೇ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಶುಕ್ರವಾರ, ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್, ಕಾಳಿದಾಸ್ ಕೊಲಂಬಕರ್ ಅವರ ಸ್ಥಾನಕ್ಕೆ ಎನ್‌ಸಿಪಿಯ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ನೇಮಿಸಲಾಗಿದೆ. ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೆ. ಕೊಲಂಬಕರ್ ಅವರನ್ನು ಬಿಜೆಪಿ ನೇಮಕ ಮಾಡಿತು.
ಶೀಘ್ರದಲ್ಲೇ ಬಹುಮತವನ್ನು ಸಾಬೀತು:
ಪ್ರಮಾಣ ವಚನ ಸ್ವೀಕರಿಸುವ ಮೊದಲು, ಮಹಾ ಅಘಾಡಿಯ ಮೂರು ಪಕ್ಷಗಳ ಶಾಸಕರು ಒಟ್ಟಾಗಿ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಶಕ್ತಿ ಪ್ರದರ್ಶಿಸಿದರು. ಇದಲ್ಲದೆ, ಮೂರು ಪಕ್ಷಗಳು ಸ್ವತಂತ್ರ ಶಾಸಕರು ತಮ್ಮೊಂದಿಗೆ ಇರುವುದಾಗಿ ಹೇಳಿಕೊಂಡಿದ್ದವು. ಈ ಸಮಯದಲ್ಲಿ ಅವರ ಬಳಿ 162 ಶಾಸಕರು ಇದ್ದಾರೆ ಎಂದು ಹೇಳಲಾಗಿತ್ತು.
ಶರದ್ ಪವಾರ್(Sharad Pawar) ಅವರ ಸೋದರಳಿಯ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯೇ ಅನುಮಾನ ಎಂದು ಹೇಳಲಾಗುತ್ತಿದೆ.