ಸಾಮಾಜಿಕ ಮಾಧ್ಯಮದಲ್ಲಿ ಆಧಾರ್ ಸಂಖ್ಯೆ ಹಂಚಿಕೊಳ್ಳದಂತೆ UIDAI ಎಚ್ಚರಿಕೆ
ಇಂಟರ್ ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳದಂತೆ UIDAI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನವದೆಹಲಿ: ಆಧಾರ್ ನಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(TRAI) ಅಧ್ಯಕ್ಷ ಆರ್. ಎಸ್. ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ವದಂತಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಇಂಟರ್ ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಆಧಾರ್ ನಂಬರ್ ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿರುವ ಯುಐಡಿಎಐ, ಯಾವುದೇ ಉದ್ದೇಶಕ್ಕಾಗಿ ಇತರರ ಆಧಾರ್ ಸಂಖ್ಯೆಯನ್ನು ಬಳಸಿದರೂ ಸಹ ಆಧಾರ್ ಕಾಯ್ದೆಯಡಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕಾನೂನಾತ್ಮಕವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದು, ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಟ್ವಿಟ್ಟರ್ ಮೂಲಕ ಎಚ್ಚರಿಕೆ ನೀಡಿದೆ.
12 ಅಂಕಿಯ ಆಧಾರ್ ಸಂಖ್ಯೆಯು ವೈಯಕ್ತಿಕವಾದ ಸೂಕ್ಷ್ಮ ಮಾಹಿತಿಯಾಗಿದೆ ಎಂದು ಯುಐಡಿಎಐ ತಿಳಿಸಿದೆ. ಇದನ್ನು ಬ್ಯಾಂಕ್ ಖಾತೆ, ಪಾಸ್ ಪೋರ್ಟ್, ಪ್ಯಾನ್ ಸೇರಿದಂತೆ ಕಾನೂನು ಬದ್ಧ ಅಗತ್ಯತೆಗಳಿಗೆ ಮಾತ್ರ ಹಂಚಿಕೊಳ್ಳಬೇಕು ಎಂದು ಯುಐಡಿಎಐ ತಿಳಿಸಿದೆ.