ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ
2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ನವದೆಹಲಿ: ಮಕ್ಕಳ ಮೇಲೆ ಅತ್ಯಾಚಾರ ಸೇರಿದಂತೆ ಲೈಂಗಿಕ ಅಪರಾಧವೆಸಗುವವರಿಗೆ ಗಲ್ಲು ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸುವ ನಿಟ್ಟಿನಲ್ಲಿ 2012ರ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದ್ದು, ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ನೀಡಿದೆ.
ಈ ಹಿಂದೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆಯುತ್ತಿದ್ದ ತೀವ್ರ ಸ್ವರೂಪದ ಅತ್ಯಾಚಾರಕ್ಕೆ ಮಾತ್ರ ಮರಣದಂಡನೆ ವಿಧಿಸಲಾಗುತ್ತಿತ್ತು. ಆದರೀಗ, ಪೋಕ್ಸೋ ಕಾಯ್ದೆಯಡಿ ಬರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇತ್ಯಾದಿ ಅಪರಾಧಗಳಿಗೂ ಗಲ್ಲು ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ವಿಧಿಸಲು ಅವಕಾಶ ನೀಡುವಂತೆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಪೋಕ್ಸೊ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.