ನವದೆಹಲಿ: ಬಹಳ‌ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೆ ಕಡೆಗೂ ಕಾಲ‌ ಕೂಡಿಬಂದಿದ್ದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ. 


COMMERCIAL BREAK
SCROLL TO CONTINUE READING

2019ರ ಲೋಕಸಭಾ ಚುನಾವಣೆ ಮತ್ತು ಅದಕ್ಕೂ ಮುನ್ನ ನಡೆಯುವ ಗುಜರಾತ್, ಹಿಮಾಚಲಪ್ರದೇಶ, ಛತ್ತೀಸ್ ಘಡ, ಮಧ್ಯಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಂಪುಟಕ್ಕೆ ದೊಡ್ಡ ಮಟ್ಟದಲ್ಲಿ ಸರ್ಜರಿ ಮಾಡಲಾಗುತ್ತಿದೆ. 


ಕರ್ನಾಟಕದಿಂದ ಸುರೇಶ್ ಅಂಗಡಿ, ಶೋಭಾ ಕರಂದ್ಲಾಜೆ ಮತ್ತು ಬಿ. ಶ್ರೀರಾಮುಲು‌ ಹೆಸರುಗಳು ಕೇಳಿಬರುತ್ತಿವೆ. ಜೊತೆಜೊತೆಗೆ ರಾಜ್ಯದಿಂದ ಈಗಾಗಲೇ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡ ಮತ್ತು ಅನಂತಕುಮಾರ್ ಅವರಿಗೆ ಇಬ್ಬರಲ್ಲಿ ಒಬ್ಬರಿಗೆ ಇರುವ ಖಾತೆಗಿಂತಲೂ ಉತ್ತಮ ‌ಖಾತೆ ಕೊಟ್ಟು ಭಡ್ತಿ ನೀಡಲಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ‌.


ರಾಜ್ಯದಲ್ಲಿ ಈಗ ಒಕ್ಕಲಿಗ ಸಮುದಾಯದಿಂದ ಡಿ.ವಿ. ಸದಾನಂದಗೌಡ, ಬ್ರಾಹ್ಮಣ ಸಮುದಾಯದಿಂದ ಅನಂತಕುಮಾರ್ ಮತ್ತು ದಲಿತ ಸಮುದಾಯದಿಂದ ರಮೇಶ್ ಜಿಗಜಿಣಗಿ ಕೇಂದ್ರ ಸಂಪುಟದಲ್ಲಿದ್ದಾರೆ. ಜಾತಿ ಲೆಕ್ಕಾಚಾರದ ಮೇಲೆ ಪ್ರಭಾವಿ ಸಮುದಾಯವಾದ ಲಿಂಗಾಯಿತರಿಗೆ ಒಂದು ಸ್ಥಾನವನ್ನು ಕೊಡಲೇಬೇಕೆಂದು‌ ಬೆಳಗಾವಿ ಸಂಸದ ಸುರೇಶ್ ಅಂಗಡಿ ಹೆಸರನ್ನು ಪರಿಗಣಿಸಲಾಗಿದೆ. ಸುರೇಶ್ ಅಂಗಡಿ ಪರವಾಗಿ ರಾಜ್ಯ ಆರ್ ಎಸ್ ಎಸ್ ನಾಯಕರೂ ಶಿಫಾರಸು ಮಾಡಿದ್ದಾರೆಂದು ತಿಳಿದುಬಂದಿದೆ. 


ಈಗಾಗಲೇ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಲಿಂಗಾಯಿತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರನ್ನು ಘೋಷಿಸಿರುವುದರಿಂದ‌ ಇನ್ನೊಂದು ಪ್ರಭಾವಿ ಸಮುದಾಯವಾದ ಒಕ್ಕಲಿಗ ಜಾತಿಗೆ ಕೇಂದ್ರ ಸಂಪುಟದಲ್ಲಿ ಇನ್ನೊಂದು ಸ್ಥಾನ ಕಲ್ಪಿಸುವ ಲೆಕ್ಕಾಚಾರ ಹಾಕಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.


ಇದಲ್ಲದೆ ರಾಜ್ಯದ ಕೆಲವು‌ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ನಾಯಕ‌ ಸಮಾಜದ ಮುಖಂಡ‌ ಬಿ.‌ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಆ ಸಮುದಾಯದ ಮತ ಸೆಳೆಯುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಲೋಚನೆ ಎನ್ನಲಾಗಿದೆ. ಹಾಗಾಗಿ ಶ್ರೀರಾಮುಲು ಅವರಿಗೂ ಅವಕಾಶ ಬರುವ ಸಾಧ್ಯತೆ ಇದೆ. ಈ ಮೂವರ ಪೈಕಿ ಯಾರಾದರೂ ಇಬ್ಬರಿಗೆ ಮಾತ್ರ ಮಂತ್ರಿಯಾಗುವ ಅದೃಷ್ಟ ಖುಲಾಯಿಸಲಿದೆ. ಉಳಿದಂತೆ ಈ ಸಲ ಬಹಳ ದೊಡ್ಡ ಮಟ್ಟದ ಬದಲಾವಣೆಗಳಾಗಲಿದ್ದು ಹಲವರು ಸ್ಥಾನ ಕಳೆದುಕೊಳ್ಳುವ ಹಲವರು  ಸ್ಥಾನ ಪಡೆಯವ ಸಾಧ್ಯತೆಗಳಿವೆ. ಈಗಾಗಲೇ ಕೆಲವರು ರಾಜೀನಾಮೆ ನೀಡಿದ್ದಾರೆ.