ಪ್ರಧಾನಿ ಮೋದಿ ಸರ್ಕಾರದಲ್ಲಿ ಭಯೋತ್ಪಾದನೆ, ದಂಗೆ, ಹಿಂಸಾಚಾರ ಶೇ.80ರಷ್ಟು ಇಳಿಕೆ: ಅಮಿತ್ ಶಾ
Amit Shah: ಕಳೆದ 70 ವರ್ಷಗಳಲ್ಲಿ ಕಾಶ್ಮೀರಕ್ಕೆ 12 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಕೇವಲ 3 ವರ್ಷಗಳಲ್ಲಿ 12 ಸಾವಿರ ಕೋಟಿ ರೂ. ಹಣವನ್ನು ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಎಡಪಂಥೀಯ ಉಗ್ರವಾದ ಸೇರಿದಂತೆ ದೇಶದಲ್ಲಿ ಶೇ.80ರಷ್ಟು ಹಿಂಸಾಚಾರ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಾಗ್ಪುರ್ ನಲ್ಲಿ ಲೋಕಮತ್ ಮೀಡಿಯಾ ಗ್ರೂಪ್ ಶನಿವಾರ ಆಯೋಜಿಸಿದ್ದ ಪತ್ರಿಕೆಯ ಸಂಸ್ಥಾಪಕ-ಸಂಪಾದಕ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ದರ್ದಾರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
‘ಜಗತ್ತಿನಲ್ಲಿ ಭಾರತ ಅಗ್ರಮಾನ್ಯ ಸ್ಥಾನಮಾನ ಪಡೆಯಬೇಕೆಂಬುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಪ್ರತಿಪಕ್ಷಗಳು ಪ್ರಕ್ಷುಬ್ಧ ರಾಜ್ಯದಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳುತ್ತಿದ್ದ ರು. ಆದರೆ ನಾವು ರಕ್ತ ಚೆಲ್ಲುವುದನ್ನು ಮಾತ್ರವಲ್ಲದೆ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳನ್ನು ಸಹ ನಿಲ್ಲಿಸಿದ್ದೇವೆ. ಕಳೆದ ವರ್ಷ 1.8 ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು-ಕಾಶ್ಮೀರ್‍ಗೆ ಭೇಟಿ ನೀಡಿದ್ದರು’ ಎಂದು ಶಾ ಹೇಳಿದ್ದಾರೆ.
‘ಕಳೆದ 70 ವರ್ಷಗಳಲ್ಲಿ ಕಾಶ್ಮೀರಕ್ಕೆ 12 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಕೇವಲ 3 ವರ್ಷಗಳಲ್ಲಿ 12 ಸಾವಿರ ಕೋಟಿ ರೂ. ಹಣವನ್ನು ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಕಣಿವೆ ರಾಜ್ಯದ ಅಭಿವೃದ್ಧಿ ಕೇಂದ್ರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ’ ಎಂದು ಹೇಳಿದರು.
ಇದನ್ನೂ ಓದಿ: ಶಿವರಾತ್ರಿಯಂದೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚಿರತೆಗಳು..!
ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವ ಪ್ರಧಾನಿ ಮೋದಿಯವರ ಉಪಕ್ರಮವನ್ನು ಶ್ಲಾಘಿಸಿದ ಶಾ, ‘ಪ್ರಧಾನಿಯವರು ಈ ಕಾರ್ಯಕ್ರಮವನ್ನು ಸರ್ಕಾರಿ ಕಚೇರಿಗೆ ಸೀಮಿತಗೊಳಿಸದೆ 130 ಕೋಟಿ ಭಾರತೀಯರು ಭಾಗವಹಿಸುವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ದೇಶದ ನಾಗರಿಕರಿಗೆ 3 ಗುರಿಗಳನ್ನು ಹೊಂದಿದ್ದಾರೆ. ನಮ್ಮ ಮಕ್ಕಳು, ಹದಿಹರೆಯದವರು ಮತ್ತು ಯುವಕರು ಸೇರಿದಂತೆ ನಮ್ಮ ಮುಂದಿನ ಪೀಳಿಗೆಯು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮತ್ತು ನಮ್ಮ ದಂತಕಥೆಗಳು ತಮ್ಮ ಪ್ರಾಣವನ್ನು ಹೇಗೆ ತ್ಯಾಗ ಮಾಡಿದರು ಎಂಬುದರ ಕುರಿತು ಸರಿಯಾದ ಮಾಹಿತಿ ಪಡೆಯಬೇಕು., 1857 ರಿಂದ 1947ರವರೆಗೆ ಇದು 90 ವರ್ಷಗಳ ಅವಧಿಯಾಗಿದೆ’ ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.