ನವದೆಹಲಿ: ಪಂಜಾಬ್ ಮತ್ತು ಹರಿಯಾಣದಲ್ಲಿ ಎಎಪಿ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ  ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿಯಲ್ಲಿ ಕಾಂಗ್ರೆಸ್-AAP ಪಕ್ಷದ ನಡುವಿನ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ(ಎಪ್ರಿಲ್ 19) ದಂದು ಹರಿಯಾಣದಲ್ಲಿ ಎಎಪಿ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ದೆಹಲಿಯಲ್ಲಿ ಮಾತ್ರ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಆಮ್ ಆದ್ಮಿ ಪಕ್ಷ ಸಿದ್ಧವಿಲ್ಲ ಎಂದು ಸಿಸೋಡಿಯಾ ಸ್ಪಷ್ಟ ಪಡಿಸಿದ್ದಾರೆ.


'ಮೋದಿ-ಶಾ' ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟುವ ಉದ್ದೇಶದಿಂದ ನಾವು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಮುಂದಾಗಿದ್ದೆವು. ಆದರೆ ಮೋದಿ-ಶಾ ರಿಂದ ದೇಶವನ್ನು ಅಪಾಯದಿಂದ ರಕ್ಷಿಸುವ ಬದಲು ಕಾಂಗ್ರೆಸ್ ಸೀಟು ಹಂಚಿಕೆ ಹಿಂದೆ ಬಿದ್ದಿದೆ ಎಂದು ಮನೀಶ್ ಸಿಸೋಡಿಯಾ ಅಸಮಾಧಾನ ಹೊರಹಾಕಿದ್ದಾರೆ.


ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವ ಬಗೆಗಿನ ಸೂಕ್ಷ್ಮತೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದೆನಿಸುತ್ತಿದೆ. ಮೈತ್ರಿ ಮಾತುಕತೆ ಬಗ್ಗೆ ನಮ್ಮ ಪಕ್ಷದಿಂದ ಎಲ್ಲಾ ರೀತಿಯ ಪ್ರಯತ್ನಗಳೂ ನಡೆದಿದೆ. ಈಗ ನಿರ್ಧಾರ ಕಾಂಗ್ರೆಸ್ ಪಕ್ಷದವರ ಕೈಯಲ್ಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.