ನವದೆಹಲಿ: ಕೊರೊನಾ ವೈರಸ್ ಹಾವಳಿಯ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ನಾಳೆ ಬಳಗ್ಗೆ 6 ಗಂಟೆಯಿಂದ ಮಾರ್ಚ್ 31ರ ಮಧ್ಯರಾತ್ರಿಯವರೆಗೆ ಈ ಲಾಕ್ ಡೌನ್ ಅಸ್ತಿತ್ವದಲ್ಲಿ ಇರಲಿದೆ ಎಂದು ಘೋಷಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಗಳು ನಡೆಯುವುದಿಲ್ಲ. ದೆಹಲಿಯಲ್ಲಿ ಇದುವರೆಗೆ ಕೊರೊನಾ ವೈರಸ್ ನ ಸುಮಾರು 27 ಪ್ರಕರಣಗಳು ಬೆಳಕಿಗೆ ಬಂದಿದ್ದು, 6 ಜನರಲ್ಲಿ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸಿದೆ ಎಂದು ಹೇಳಿದ್ದಾರೆ. 21 ಜನರಿಗೆ ಈ ಸೋಂಕು ವಿದೇಶದಲ್ಲಿಯೇ ತಗುಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ನಿಂದ ಜನ ಸಾಮಾನ್ಯರಿಗೆ ಸ್ವಲ್ಪ ತೊಂದರೆ ಉಂಟಾಗಲಿದೆ ಎಂದು ಒಪ್ಪಿಕೊಂಡಿರುವ ಕೆಜ್ರಿವಾಲ್ ಲಾಕ್ ಡೌನ್ ನಂತಹ ಕ್ರಮ ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಯಾವ ಸೇವೆ ಜಾರಿಯಲ್ಲಿರಲಿವೆ ಹಾಗೂ ಯಾವ ಸೇವೆ ಬಂದ್ ಇರಲಿವೆ?


ಯಾವುದೇ ಪಬ್ಲಿಕ್ ಟ್ರಾನ್ಸ್ಪೋರ್ಟ್ ಗೆ ಅನುಮತಿ ಇರುವುದಿಲ್ಲ. ಇವುಗಳಲ್ಲಿ ಪ್ರೈವೇಟ್ ಬಸ್, ಟ್ಯಾಕ್ಸಿ, ಆಟೋ ರಿಕ್ಷಾ, ಇ-ರಿಕ್ಷಾ ಇತ್ಯಾದಿಗಳು ಬಂದ್ ಇರಲಿವೆ. DTC ಶೇ.25ರಷ್ಟು ಬಸ್ ಗಳು ಸೇವೆಯಲ್ಲಿರಲಿದ್ದು, ಎಲ್ಲ ಅತ್ಯಾವಶ್ಯಕ ಸೇವೆ ಒದಗಿಸುವವರನ್ನು ಗಮನದಲ್ಲಿಟ್ಟು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಜ್ರಿ ಹೇಳಿದಾರೆ.


ದೆಹಲಿಯ ಎಲ್ಲ ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆಗಳು ವ್ಯಾಪಾರಿ ಸಂಘಟನೆಗಳು, ಫ್ಯಾಕ್ಟರಿಗಳು, ವರ್ಕ್ ಶಾಪ್, ಆಫೀಸ್, ಗೋದಾಮು ಹಾಗೂ ವಾರದ ಮಾರುಕಟ್ಟೆಗಳೆಲ್ಲವೂ ಕೂಡ ಬಂದ್ ಇರಲಿವೆ.


ದೆಹಲಿಗೆ ಹೊಂದಿಕೊಂಡಂತೆ ಇರುವ ಎಲ್ಲ ಬಾರ್ಡರ್ ಗಳನ್ನೂ ಸೀಲ್ ಮಾಡಲಾಗಿದೆ. ಅತ್ಯಾವಶ್ಯಕ ಆಹಾರ ಪದಾರ್ಥಗಳಾಗಿರುವ ಹಾಲು, ತರಕಾರಿ, ಆಹಾರ ಸಾಮಗ್ರಿಗಳು ಮಾರಾಟಕ್ಕೆ ಅನುಮತಿ ನೀಡಲಾಗಿದೆ.


ದೆಹಲಿಯಲ್ಲಿ ಎಲ್ಲ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನಯಾನಗಳನ್ನೂ ರದ್ದುಪಡಿಸಲಾಗಿದೆ, ಇಂಟರ್ ಸ್ಟೇಟ್ ಬಸ್ ಸೇವೆ, ಮೆಟ್ರೋ, ಟ್ರೈನ್ ಸೇವೆಗಳೂ ಕೂಡ ನಾಳೆಯಿಂದ ಮಾರ್ಚ್ 31ರವೆರೆಗೆ ಬಂದ್ ಇರಲಿವೆ.


ಎಲ್ಲ ಖಾಸಗಿ ಸಂಸ್ಥೆಗಳು ಈ ಅವಧಿಯಲ್ಲಿ ಬಂದ್ ಇರಲಿವೆ. ಆದರೆ ಈ ಅವಧಿಯಲ್ಲಿ ಪೂರ್ಣಾವಧಿ ಹಾಗೂ ಕಾಂಟ್ರಾಕ್ಟ್ ನಲ್ಲಿರುವ ಎಲ್ಲ ನೌಕರರ ಹಾಜರಾತಿ ಪರಿಗಣಿಸಲಾಗುವುದು. ಅವರ ವೇತನವನ್ನು ಕಂಪನಿಗಳು ತಡೆಹಿಡಿಯಬಾರದು.


ಆಹಾರ-ಪದಾರ್ಥಗಳು, ತರಕಾರಿ, ಹಾಲು, ಮಾಂಸಾಹಾರಿ, ರೇಶನ್ ಅಂಗಡಿಗಳು ಎಂದಿನಂತೆ ತೆರೆದುಕೊಳ್ಳಲಿವೆ.


ಎಲ್ಲಾ ಬ್ಯಾಂಕ್ ಹಾಗೂ ATMಗಳೂ ಕೂಡ ತೆರೆದುಕೊಳ್ಳಲಿವೆ. ಜನರಿಗೆ ಹಣಕಾಸಿನ ಯಾವುದೇ ತೊಂದರೆ ಉಂಟಾಗುವುದಿಲ್ಲ.


ಔಷಧಿ ಅಂಗಡಿಗಳು, ಆಸ್ಪತ್ರೆಗಳು, ವಾಟರ್ ಪ್ಲಾಂಟ್ಸ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.


ಈ ಅವಧಿಯಲ್ಲಿ ಮಾಸ್ಕ್, ಸೇನಿಟೈಸರ್ ಗಳ ಬ್ಲಾಕ್ ಮಾರ್ಕೆಟಿಂಗ್ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅರವಿಂದ್ ಕೆಜ್ರಿವಾಲ್ ಹೇಳಿದ್ದಾರೆ. ಜೊತೆಗೆ ಎಲ್ಲ ಖಾಸಗಿ ಕಂಪನಿಗಳು ಬಂದ್ ಇರಲಿದ್ದು, ನೌಕರರ ವೇತನ ಕಡಿತಗೊಳಿಸುವ ಕಂಪನಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ನೌಕರರು ಒಂದು ವೇಳೆ ಮನೆಯಲ್ಲಿಯೇ ಉಳಿದರೂ ಕೂಡ ಅವರ ಪೂರ್ಣಪ್ರಮಾಣದ ಹಾಜರಾತಿ ಪರಿಗಣಿಸಬೇಕು ಎಂದು ಕೆಜ್ರಿವಾಲ್ ಹೇಳಿದ್ದಾರೆ.