ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು, ಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳ ಬೆಳೆಯನ್ನು ಕಾಣಬಹುದಾಗಿದೆ.


COMMERCIAL BREAK
SCROLL TO CONTINUE READING

ರೈತರ ತಾಕುಗಳಿಗೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಸೈನಿಕ ಹುಳುವಿನ ಬಾಧೆ ಹೆಚ್ಚಾಗಿರುವುದು ಕಂಡುಬಂದಿದ್ದು, ಇಲಾಖಾ ಅಧಿಕಾರಿಗಳು ರೈತರಿಗೆ ಸೂಕ್ತ ಸಲಹೆ ನೀಡುವಲ್ಲಿ ನಿರತರಾಗಿರುತ್ತಾರೆ. ಸೈನಿಕ ಹುಳುವಿನ ಗುರುತಿಸುವಿಕೆ ಹಾಗೂ ಹತೋಟಿ ಕ್ರಮಗಳು ಈ ಕೆಳಗಿನಂತಿವೆ.


ಲದ್ದಿಹುಳುವಿನ ಗುರುತಿಸುವಿಕೆ: ಬೆಳೆದ ಹುಳುವಿನ ಕಪ್ಪು ತಲೆಯ ಮುಂಬಾಗದಲ್ಲಿ ತಲೆ ಕೆಳಗಾದ ಙ ಆಕೃತಿಯ ಗುರುತು ಹಾಗೂ ಹುಳದ ಹಿಂಬಾಗದಲ್ಲಿ ನಾಲ್ಕು ದಟ್ಟವಾದ ಕಂದುಬಣ್ಣದ ಚುಕ್ಕೆಗಳು ಚೌಕಾಕಾರದಲ್ಲಿ ಕಂಡುಬರುತ್ತವೆ.


ಲದ್ದಿ ಹುಳುವಿನ ಹತೋಟಿ ಕ್ರಮಗಳು: “ಜೂನ್ ರಿಂದ ಜುಲೈ 15” ರವರೆಗೆ ಸಕಾಲದಲ್ಲಿ ಬಿತ್ತನೆ ಮಾಡುವುದು. ಬಿಗಿ ತೆನೆ ಕವಚ ಇರುವ ಹೈಬ್ರಿಡ್ ಮುಸುಕಿನಜೋಳದ ತಳಿಗಳನ್ನು ಬಿತ್ತುವುದು. ಮುಸುಕಿನ ಜೋಳದ ಜೊತೆ ಮಿಶ್ರ ಬೆಳೆ (ಮುಸುಕಿನ ಜೋಳ+ತೊಗರಿ) ಬಿತ್ತುವುದು.


ಸಮತೋಲನ ರಾಸಾಯನಿಕ ಗೊಬ್ಬರ ಬಳಸುವುದು.ಮೊಟ್ಟೆಗಳ ಗುಂಪು ಹಾಗೂ ಮೊದಲ ಹಂತದ ಮರಿಗಳಿರುವ ಎಲೆಗಳನ್ನು ಕಿತ್ತು ನಾಶಮಾಡುವುದು. ಪ್ರತಿ ಎಕರೆಗೆ 30 ಪಕ್ಷಿ ಸೂಚಿಗಳನ್ನು ನೆಡುವುದು.


30 ದಿನಗಳ ಬೆಳೆಯಲ್ಲಿ ಪ್ರತಿ ಎಕರೆಗೆ 15ರಂತೆ ಮೋಹಕ ಬಲೆಗಳನ್ನು ಅಳವಡಿಸುವುದು. ತತ್ತಿಗಳ ಪರತಂತ್ರ ಜೀವಿಯಾದ ಟ್ರೈಕೊಗ್ರಾಮ ಪ್ರೀಟಿಯೋಸಮ್ ಅನ್ನು ಪ್ರತಿ ಎಕರೆಗೆ 50,000ದಂತೆ (3 ಟ್ರೈಕೋಕಾರ್ಡ್‍ಗಳನ್ನು) ನಿರ್ಧರಿತ ಅಂತರದಲ್ಲಿ ಬೆಳೆಗಳಲ್ಲಿ ಬಿಡುವುದು.


ಮೆಟರೈಜೀಂ ಅನಿಸೋಪ್ಲಿಯೆ (್ಠ1108 ಸಿಎಫ್‍ಯು/ಗ್ರಾಂ) 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಅಥವಾ ನ್ಯೂಮೋರಿಯಾ ರಿಲೈ (್ಠ1108 ಸಿಎಫ್‍ಯು/ಗ್ರಾಂ) ಅನ್ನು 3 ಗ್ರಾಂ. ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಗೆ ಸಿಂಪರಣೆ ಮಾಡುವುದು.
ಲದ್ದಿ ಹುಳುವಿನಿಂದ ಶೇ.10ರಷ್ಟು (ಪ್ರತಿ 100 ಗಿಡಗಳಿಗೆ 10 ಗಿಡಗಳು) ಹಾನಿಯಾಗಿದ್ದಲ್ಲಿ ಶೇ.5ರ ಬೇವಿನ ಕಷಾಯ (ಅಜಾಡಿರಕ್ಟಿನ್ 1500 ಪಿಪಿಎಂ) 5 ಮಿ. ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.


ಲದ್ದಿ ಹುಳುವಿನಿಂದ ಶೇ.20 ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ 5% ಎಸ್. ಜಿ ಅನ್ನು 0.4ಗ್ರಾಂ. ನಂತೆ ಅಥವಾ ಸ್ಪೈನೋಸಾಡ್ 45 ಎಸ್. ಸಿ. ಅನ್ನು 0.3 ಮಿ.ಲೀ. ಅಥವಾ ಥೈಯೋಡಿಕಾರ್ಬ್‍ನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡುವುದು ಹಾಗೂ ಪ್ರತಿ ಸಿಂಪರಣೆಯನ್ನು ಮುಂಜಾನೆ /ಸಾಯಂಕಾಲದಲ್ಲಿ ಕೈಗೊಳ್ಳುವುದು.


ವಿಷಪ್ರಾಶನದ ಬಳಕೆ: 10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿತೌಡಿಗೆ 1 ಕೆ.ಜಿ. ಬೆಲ್ಲ ಹಾಗೂ ಸ್ವಲ್ಪ ನೀರನ್ನು ಬೆರೆಸಿಟ್ಟು, ಮಾರನೇ ದಿನ 100 ಗ್ರಾಂ ಥೈಯೋಡಿಕಾರ್ಬ್ (ಪ್ರತಿ ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿತೌಡಿಗೆ 10 ಗ್ರಾಂ. ನಂತೆ) ಕೀಟನಾಶಕ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಉದುರಿಸುವುದು.


ವಿಶೇಷ ಸೂಚನೆ: ಕೀಟನಾಶಕವನ್ನು ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು ಹಾಗೂ ಕೀಟನಾಶಕ ಸಿಂಪರಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಬಳಸಿ ಸಿಂಪರಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು.


ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ / ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು / ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.