ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ: ಮುಂಬೈನಲ್ಲಿ ಅಮಿತ್ ಷಾಗೆ ಕಾಂಗ್ರೆಸ್ ಟಾಂಗ್!
ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು `ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ` ಎಂಬ ಮಾತನ್ನು ಫ್ಲೆಕ್ಸ್`ನಲ್ಲಿ ಟ್ಯಾಗ್ ಲೈನ್ ಆಗಿ ಬಳಸಲಾಗಿದೆ.
ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮುಂಬೈ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಹುಲ್ ಅಪ್ಪುಗೆಯ ಫ್ಲೆಕ್ಸ್ ಗಳನ್ನು ನಗರಾದ್ಯಂತ ಅಳವಡಿಸಿ, ಶಾಗೆ ಟಾಂಗ್ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ, ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು "ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ" ಎಂಬ ಮಾತನ್ನು ಫ್ಲೆಕ್ಸ್'ನಲ್ಲಿ ಟ್ಯಾಗ್ ಲೈನ್ ಆಗಿ ಬಳಸಲಾಗಿದೆ.
ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ತಮ್ಮ ಭಾಷಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, "ನಾನು ನಿಮಗೆ ಪಪ್ಪು ಇರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶ ಕಟ್ಟಿದೆ. ಈ ಭಾವನೆ ನಿಮ್ಮಲ್ಲೂ ಇದೆ, ನಿಮ್ಮೊಳಗಿನ ಭಾವನೆ ಹೊರತರುವೆ, ನಿಮ್ಮನ್ನೂ ಕಾಂಗ್ರೆಸ್ಸಿಗರನ್ನಾಗಿ ಮಾಡುವೆ" ಎಂದು ಹೇಳಿದ್ದಲ್ಲದೆ, ಪ್ರಧಾನಿ ಮೋದಿ ಕುಳಿತಿದ್ದ ಕಡೆ ತೆರಳಿ ಅವರನ್ನು ಅಪ್ಪಿಕೊಂಡಿದ್ದರು. ಮತ್ತೆ ತಮ್ಮ ಸ್ಥಳಕ್ಕೆ ಬಂದು, "ನಾನು ಹಿಂದು, ನೀವು ಎಷ್ಟೇ ದೂರ ತಳ್ಳಿದರೂ ಹತ್ತಿರಮಾಡಿಕೊಳ್ಳುತ್ತೇನೆ" ಎಂದು ಹೇಳಿ ಮೋದಿ ಕಡೆ ನೋಡಿ ಕಣ್ಣು ಹೊಡೆದಿದ್ದರು.
ಇದೀಗ ಆ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮುಂಬೈ ಕಾಂಗ್ರೆಸ್ ಘಟಕ ಇದನ್ನೇ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು, ಫ್ಲೆಕ್ಸ್ನಲ್ಲಿ ‘ದ್ವೇಷದಿಂದ ಅಲ್ಲ, ಪ್ರೀತಿಯಿಂದ ಗೆಲ್ಲಬೇಕು’ ಎಂಬ ಟ್ಯಾಗ್ ಲೈನ್ ಕೂಡಾ ಹಾಕಿದ್ದಾರೆ.