ತಿರುವನಂತಪುರ : ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಇನ್ನು ಮುಂದೆ ವಯಸ್ಸಿನ ಅಧಿಕೃತ ದಾಖಲೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಈ ದೇವಾಲಯದಲ್ಲಿ 10 ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. 
ನವಂಬರ್‌ 14ರಿಂದ ಜನವರಿ 14ರ ಮಕರ ಜ್ಯೋತಿ ದರ್ಶನದವರೆಗಿನ ಮೂರು ತಿಂಗಳ ಅವಧಿಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದು, ಭಕ್ತರ ಸಂಖ್ಯೆ ಉತ್ತುಂಗಕ್ಕೇರಲಿದೆ. ಈ ಸಂದರ್ಭ ಕೆಲವು ಮಹಿಳಾ ಭಕ್ತರು ನಿರ್ಬಂಧಗಳನ್ನು ಕಡೆಗಣಿಸಿ ದೇವಾಲಯ ಪ್ರವೇಶಿಸುವುದನ್ನು ತಡೆಯಲು ತಿರುವಾಂಕೂರು ದೇವಸ್ವಂ ಟ್ರಸ್ಟ್‌ ಈ ಸೀಸನ್‌ನಿಂದಲೇ ವಯೋ ದಾಖಲೆ ಕಡ್ಡಾಯಗೊಳಿಸಿದೆ. ದೇವಳ ಇರುವ ಬೆಟ್ಟ ಹತ್ತಲು ಆರಂಭಿಸುವ ಪಂಪಾ ತೀರದಲ್ಲೇ ದಾಖಲೆ ತಪಾಸಣೆ ನಡೆಯಲಿದೆ.


ಜನನ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲೆ, ಆಧಾರ್‌ ಕಾರ್ಡ್‌ ಸೇರಿದಂತೆ ವಯಸ್ಸಿನ ಮಾಹಿತಿ ಇರುವ ಯಾವುದೇ ಅಧಿಕೃತ ದಾಖಲೆಯನ್ನು ಪರಿಶೀಲನೆ ವೇಳೆ ಸ್ವೀಕರಿಸಲಾಗುವುದು ಎಂದು ದೇವಸ್ವಂ ಮಂಡಳಿಯ ಅಧ್ಯಕ್ಷ ಎ. ಪದ್ಮಕುಮಾರ್‌ ಹೇಳಿದ್ದಾರೆ.


ಈ ನಡುವೆ, 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಸಂಪ್ರದಾಯವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಇನ್ನೂ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಲ್ಲಿ ವಿಚಾರಣೆಯಲ್ಲಿದೆ.