ಐಟಿ ನೌಕರರಿಗೆ ಜುಲೈ 31ರವರೆಗೂ ವರ್ಕ್ ಫ್ರಮ್ ಹೋಮ್: ರವಿಶಂಕರ್ ಪ್ರಸಾದ್
ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷ ಮಾರ್ಚ್‌ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು.
ಬೆಂಗಳೂರು: ಕೊವಿಡ್ (Coronavirus) ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಮುಂದಿನ ಜುಲೈ 31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೊರೊನಾ ಲಾಕ್ ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲಾ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರನ್ಸ್ ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ವಿಷಯ ಪ್ರಕಟಿಸಿದ್ದಾರೆ.
ಲಾಕ್ ಡೌನ್ ಬಳಿಕ ರಾಜ್ಯ ಐಟಿ ವಲಯ ಎದುರಿಸುತ್ತಿರುವ ಸವಾಲುಗಳು, ಕಂಡುಕೊಂಡಿರುವ ಪರಿಹಾರಗಳು ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ (IT-BT) ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಡಾ.ಸಿ.ಎನ್ ಅಶ್ಬತ್ಥನಾರಾಯಣ (Dr CN Ashwathnarayan) , ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷ ಮಾರ್ಚ್‌ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸದ್ಯ ಜುಲೈ 31ರ ವರೆಗೆ ವರ್ಕ್ ಫ್ರಮ್ ಹೋಂ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಿಸೆಂಬರ್‌ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ ಅಶ್ವತ್ಥನಾರಾಯಣ
ಐಟಿ ವಲಯ ಸದ್ಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ರಾಜ್ಯದ ಐಟಿ ವೃತ್ತಿಪರರ ಜತೆ ಪ್ರತ್ಯೇಕ ವೀಡಿಯೋ ಕಾನ್ಫರೆನ್ಸ್ ನಡೆಸಬೇಕೆಂಬ ಡಾ. ಅಶ್ವತ್ಥನಾರಾಯಣ ಅವರ ಕೋರಿಕೆಗೂ ಸಕಾರಾತ್ಮಕವಾಗಿ ಸ್ಪಂದಿಸಿದ ರವಿ ಶಂಕರ್ ಪ್ರಸಾದ್, ಶೀಘ್ರದಲ್ಲೇ ವೀಡಿಯೋ ಕಾನ್ಫರೆನ್ಸ್ ನಡೆಸುವ ಭರವಸೆ ನೀಡಿದರು.
ಕಾರ್ಯ ತಂತ್ರ ಸಮಿತಿ:
ಕೊವಿಡ್‌ನಂಥ ಪರಿಸ್ಥಿತಿ ಎದುರಾದಾಗ ಐಟಿ ಹಾಗೂ ಸಂಬಂಧಿತ ವಲಯಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು. ವಿಪತ್ತಿನ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ಪರಿಹಾರ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರ ಮಟ್ಟದ ಕಾರ್ಯತಂತ್ರ ಸಮಿತಿ ರಚಿಸಲಾಗುವುದು ಎಂದು ಕೆಂದ್ರ ಸಚಿವರು ತಿಳಿಸಿದರು.
ಐಟಿ ವಲಯ ಮಾತ್ರವಲ್ಲದೆ, ಎಲ್ಲ ರಾಜ್ಯಗಳು ಅನ್ವೇಷಣೆ, ಸ್ಟಾರ್ಟ್‌ಅಪ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇ-ಆಡಳಿತ, ಇ-ಪಾಸ್‌ಗಳ ಪರಿಣಾಮಕಾರಿ ಜಾರಿಗೆ ಗಮನ ಹರಿಸಲಾಗುವುದು. ಜತೆಗೆ, ಕೊವಿಡ್ ಸಮಸ್ಯೆ ಎದುರಾದಾಗಿನಿಂದ ಬಹುತೇಕ ಎಲ್ಲ ವಲಯಗಳ ಕೆಲಸದ ರೀತಿ ನೀತಿ ಬದಲಾಗಿದ್ದು, ಶೇ. 80ರಷ್ಟು ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಭಾರತ್ ನೆಟ್ ಯೋಜನೆ ಮೂಲಕ ದೇಶದ ಮೂಲೆಮೂಲೆಗೂ ಇಂಟರ್ನೆಟ್ ಸಂಪರ್ಕ ಜಾಲ ಬಲಪಡಿಸಲಾಗುತ್ತದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದರು.
ಮೇಕ್ ಇನ್ ಇಂಡಿಯಾ:
"ಮೇಕ್ ಇನ್ ಇಂಡಿಯಾ ಯೋಜನೆಗಳ ಕಾರ್ಯರೂಪಕ್ಕೆ ಇದು ಸಕಾಲ. ಕೊವಿಡ್ ನಂತರದಲ್ಲಿ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ನಾವು ತಕ್ಕ ಮಟ್ಟಿನ ಯಶಸ್ಸು ಪಡೆದಿದ್ದರೂ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವುದಕ್ಕೂ ಮೊದಲು ದೇಶದಲ್ಲಿ ಇದ್ದ ಮೊಬೈಲ್ ಉತ್ಪಾದಕ ಸಂಸ್ಥೆಗಳ ಸಂಖ್ಯೆ 2 ರಿಂದ 268ಕ್ಕೆ ಏರಿದೆ. ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ ಎಂದು ವಿವರಿಸಿದರು.
ಎಲ್ಲರೂ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಡಾ. ಅಶ್ವತ್ಥನಾರಾಯಣ ಮನವಿ
ಆನ್‌ಲೈನ್ ಆರೋಗ್ಯ ಸೇವೆ
ಕೊವಿಡ್ ನಂತರ ಆರೋಗ್ಯ ಸೇವೆಯಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಿದ್ದು ಆನ್‌ಲೈನ್ ಆರೋಗ್ಯ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕ ಸೇರಿಂದಂತೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಆನ್‌ಲೈನ್ ಆರೋಗ್ಯ ಸೇವೆ ಉತ್ತಮವಾಗಿದ್ದು, ಇತರ ರಾಜ್ಯಗಳಲ್ಲೂ ಇದು ವಿಸ್ತರಣೆ ಆಗಬೇಕು ಎಂದರು.
ಆಪ್ತ ಮಿತ್ರ ಹೆಲ್ಪ್‌ಲೈನ್
ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಮುಂತಾದ ಹಲವು ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದನ್ನು ಡಾ. ಅಶ್ವತ್ಥನಾರಾಯಣ ವೀಡಿಯೋ ಕಾನ್ಫರೆನ್ಸ್‌ನಲ್ಲಿ ವಿವರಿಸಿದರು.
500ಕ್ಕೂ ಹೆಚ್ಚು ವೃತ್ತಿಪರರು 'ಆಪ್ತ ಮಿತ್ರ ಹೆಲ್ಪ್‌ಲೈನ್'ನ ಕಾಲ್ ಸೆಂಟರ್‌ನಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 50 ಸಾವಿರ ಕರೆಗಳನ್ನು ಸ್ವೀಕರಿಸಿ, ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಇ-ಕಾಮರ್ಸ್‌ಗೆ ಪರ್ಯಾಯವಾದ ವ್ಯವಸ್ಥೆ ಕಂಡುಕೊಂಡಿದ್ದು, ರೆಡ್‌ಜೋನ್‌ನಲ್ಲಿರುವ ಜನ ಮನೆಯಿಂದ ಹೊರ ಬರುವ ಅಗತ್ಯ ಬಾರದಂತೆ ಎಲ್ಲ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತಿದೆ. ದಿನಸಿ, ಹಾಲು, ಔಷಧ, ತರಕಾರಿ ಮುಂತಾದ ವಸ್ತುಗಳನ್ನು ಮನೆಗೆ ತಲುಪಿಸಲು ವಿಧಿಸುತ್ತಿರುವ ದರ ಕೇವಲ 10 ರೂಪಾಯಿ. ಒಂದೇ ರೀತಿಯ ಸೇವೆ (ಪರಿಹಾರ ಸಾಮಗ್ರಿಗಳು) ಬೇರೆ ಬೇರೆ ಇಲಾಖೆಗಳಿಂದ ಪುನರಾವರ್ತನೆ ಆಗದಂತೆ ತಡೆಯಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ ಎಂದು ತಿಳಿಸಿದರು.