ನವದೆಹಲಿ: ಸಂಕಷ್ಟದಲ್ಲಿ ಸಿಲುಕಿರುವ ಯಸ್ ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು, ಯಸ್ ಬ್ಯಾಂಕ್ ಖಾತೆದಾರರು ಇನ್ಮುಂದೆ ಯಾವುದೇ ಬ್ಯಾಂಕ್ ATM ನಿಂದ ತಮ್ಮ ಹಣ ವಿತ್ ಡ್ರಾ ಮಾಡಬಹುದಾಗಿದೆ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಿರುವ ಬ್ಯಾಂಕ್ ಈ ಮಾಹಿತಿ ನೀಡಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಯಸ್ ಬ್ಯಾಂಕ್ ಮೊದಲು ಈ ಸೌಲಭ್ಯವನ್ನು ಹಿಂದಕ್ಕೆ ಪಡೆದಿತ್ತು.



COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಯಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮೂಲಗಳಿಂದ ಬಂದ ಮಾಹಿತಿ ಪ್ರಕಾರ ರಾಣಾ ಅವರನ್ನು ಸುಮಾರು 31 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿ ನಂತರ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಯಿಂದ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು.


ಕೇವಲ ರಾಣಾ ಕಪೂರ್ ಅವರನ್ನು ಮಾತ್ರ ವಶಕ್ಕೆ ಪಡೆಯದೇ ಅವರ ಮೂವರು ಪುತ್ರಿಯರ ನಿವಾಸಗಳ ಮೇಲೂ ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಕುರಿತು ಮಾಹಿತಿ ನೀಡಿರುವ ED ಮೂಲಗಳು ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ಅಧಿಕಾರಿಗಳು ಮುಂಬೈ ಹಾಗೂ ನವದೆಹಲಿಯ ಮೂರು ಸ್ಥಾನಗಳಲ್ಲಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.


ಮೂಲಗಳ ಪ್ರಕಾರ ರಾಣಾ ಕಪೂರ್ ಅವರ ಮೂವರು ಪುತ್ರಿಯರಾದ ರಾಖಿ ಕಪೂರ್ ಟಂಡನ್, ರೋಶನಿ ಕಪೂರ್ ಹಾಗೂ ರಾಧಾ ಕಪೂರ್ ಅವರ ನಿವಾಸಗಳ ತಪಾಸಣೆ ನಡೆಸಲಾಗಿದೆ. ಈ ಮೂವರು ಹಗರಣದ ಲಾಭಾರ್ಥಿಗಳಾಗಿರುವ ಕಾರಣ ಅವರ ನಿವಾಸಗಳ ಮೇಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.


ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಯಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧನೆಗಳನ್ನು ವಿಧಿಸಿದೆ. ಸುಮಾರು 30 ದಿನಗಳ ಕಾಲ RBI ಯಸ್ ಬ್ಯಾಂಕ್ ನ ನಿರ್ದೇಶಕರ ಮಂಡಳಿಯನ್ನು ವಿಸರ್ಜಿಸಿದ್ದು, ಬಳಿಕ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿದೆ. ಇದಕ್ಕಾಗಿ RBI ಓರ್ವ ಆಡಳಿತಾಧಿಕಾರಿಯನ್ನು ಸಹ ನೇಮಿಸಿದ್ದು, ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳಲ್ಲಿ ಕೇವಲ ರೂ.50,000 ಮಾತ್ರ ವಿಥ್ ಡ್ರಾ ಮಾಡಲು ಅನುಮತಿ ನೀಡಿದೆ.