ಡೆಹ್ರಾಡೂನ್: ಉತ್ತಮ ಆರೋಗ್ಯ ಮತ್ತು ಆಂತರಿಕ ಶಾಂತಿಗಾಗಿ ಯೋಗ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

ಉತ್ತರಾಖಂಡ್'ನ ಡೆಹ್ರಾಡೂನ್‌ನ ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಮೈದಾನದಲ್ಲಿ  ಆಯೋಜಿಸಿರುವ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ನೂರಾರು ದೈಹಿಕ ಸಮಸ್ಯೆಗಳಿಗೆ ಯೋಗ ಮದ್ದಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನರ ಜೀವನಶೈಲಿಯಲ್ಲಿ ವ್ಯಕ್ತಿಯ ದೇಹ, ಮೆದುಳು ಮತ್ತು ಆತ್ಮವನ್ನು ಒಗ್ಗೂಡಿಸುವ ಕಾರ್ಯವನ್ನು ಯೋಗ ಮಾಡುತ್ತಿದೆ. ಸದಾ ಶಾಂತಿ ನೆಲೆಸುವಂತೆ ಮಾಡುತ್ತದೆ. ಸ್ವಸ್ಥ ಹಾಗೂ ಒಳ್ಳೆಯ ಜೀವನಕ್ಕಾಗಿ ಯೋಗ ಸಮಾಜವನ್ನು ಹೆಚ್ಚು ಸಮೃದ್ಧಿಗೊಳಿಸುತ್ತಿದೆ ಎಂದು ಹೇಳಿದರು.



ಇದಕ್ಕೂ ಮುನ್ನ, ಮೈದಾನದಲ್ಲಿ ನೆರೆದಿದ್ದ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುಭಾಷಯ ಕೋರಿದ ಮೋದಿ, 'ತಾಯಿ ಗಂಗಾ ನೆಲೆಸಿರುವ ಈ ಭೂಮಿಯಲ್ಲಿ ಆದಿಶಂಕರಚಾರ್ಯ ಕಾಲಿಟ್ಟಿದ್ದಾರೆ. ಈ ಜಾಗ ವಿವೇಕಾನಂದ ಅವರಿಗೆ ಪ್ರೇರಣೆ ಮಾಡಿತ್ತು. ಅಂತಹ ಭೂಮಿಯಲ್ಲಿ ನಾವು ಈ ರೀತಿ ಸೇರಿರುವುದು ನಮ್ಮ ಸೌಭಾಗ್ಯ. ಉತ್ತರಾಖಂಡ್ ಹಲವಾರು ದಶಕಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ ಎಂದರು.


ವಿಶ್ವದಲ್ಲಿಯೇ ಭಾರತ ದೇಶ ಯೋಗಕ್ಕೆ ಪ್ರಸಿದ್ಧಿಯಾಗಿದೆ. ಪ್ರಾಚೀನ ಕಾಲದಿಂದ ಇಂದಿನವರೆಗೂ ಯೋಗ ನಿರಂತರವಾಗಿ ವಿಕಸನಗೊಲ್ಲುತ್ತಿದೆ. ಇದು ನಮ್ಮ ಭವಿಷ್ಯದ ಭರವಸೆಯ ಕಿರಣವನ್ನು ಹೊಂದಿದೆ. ಹಾಗಾಗಿ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕಿದೆ. ಅದನ್ನು ಬಿಟ್ಟು, ನಮ್ಮ ಸಂಪ್ರದಾಯ ಮತ್ತು ಸಂಸ್ಕ್ರುತಿಯನ್ನೇ ನಾವು ಸಂಶಯಿಸಿದರೆ ಅದು ಸರಿಯಲ್ಲ ಎಂದು ಮೋದಿ ಅಭಿಪ್ರಾಯಪಟ್ಟರು.


ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಮಾತನಾಡಿದ ಮೋದಿ, ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದ ಮೂಲಕ ಸ್ವಾಗತಿಸುತ್ತಿದ್ದಾರೆ. ಡೆಹ್ರಾಡೂನ್‍ನಿಂದ ಡಬ್ಲಿನ್ ವರೆಗೂ, ಶಾಂಘೈಯಿಂದ ಚಿಕಾಗೋವರೆಗೂ ಎಲ್ಲಾ ಕಡೆ ಯೋಗ ಮಾಡುತ್ತಿದ್ದಾರೆ. ವಿಶ್ವಸಂಸ್ಥೆ ಯೋಗಕ್ಕಾಗಿ ಪ್ರಸ್ತಾವನೆ ನೀಡಿದಾಗ ಎಲ್ಲಾ ದೇಶದವರು ಈ ಯೋಗಕ್ಕಾಗಿ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಯೋಗ ಇಷ್ಟರ ಮಟ್ಟಿಗೆ ಖ್ಯಾತಿಗೊಂಡಿದೆ. ವಿಶ್ವದ ಎಲ್ಲ ಜನರು ಹಾಗೂ ಎಲ್ಲ ದೇಶದವರು ಯೋಗವನ್ನು ತಮ್ಮದೇ ಎಂದುಕೊಳ್ಳುತ್ತಿದ್ದಾರೆ. ಯೋಗದ ಕುರಿತು ಏರುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧಿಗೊಂಡಿದೆ ಎಂದು ಹೇಳಿದರು.



ಡೆಹ್ರಾಡೂನ್ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಯೋಗ ಪಾಲ್ಗೊಂಡಿದ್ದರು. ಸರ್ಕಾರ ಸುಮಾರು 50 ಸಾವಿರ ಯೋಗ ಮ್ಯಾಟ್ ಗಳನ್ನು ಪೂರೈಕೆ ಮಾಡಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಜನರ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೊದಲ ಬಾರಿಗೆ ಜೂನ್ 21, 2015ರಂದು ನವದೆಹಲಿಯ ರಾಜ್ ಪಥ್'ನಲ್ಲಿ ನಡೆಯಿತು. 30,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಯೋಗ ಪ್ರದರ್ಶನ ಮಾಡಿದ್ದರು.