ಚೆನ್ನೈ: ಪ್ರಸಿದ್ಧ ಆಹಾರ ವಿತರಣಾ ಸಂಸ್ಥೆ ಜೊಮಾಟೊನ ಚೆನ್ನೈ ವಿಭಾಗದ ಕಚೇರಿಯ ಟೆರೇಸ್ ನಲ್ಲಿ ಬಳಸಿದ ಚೀಲಗಳ ವಿಲೇವಾರಿ ಮಾಡದೆ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುವು ಮಾಡಿಕೊಟ್ಟಿರುವ ಆರೋಪದ ಮೇಲೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್(ಜಿಸಿಸಿ)  ದಂಡ ವಿಧಿಸಿದೆ.


COMMERCIAL BREAK
SCROLL TO CONTINUE READING

ಕಚೇರಿಯ ಟೆರೇಸ್ ನಲ್ಲಿ ಆಹಾರ ವಿತರಣಾ ಬ್ಯಾಗುಗಳನ್ನು ಸಂಗ್ರಹಿಸಿದ್ದರಿಂದ ಬ್ಯಾಗುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದಾಗಿ ಡೆಂಗ್ಯೂ ಹರಡುವ ಭೀತಿಯಿದೆ ಎಂದಿರುವ ಕಾರ್ಪೋರೇಷನ್, ಜೊಮಾಟೊಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಜಿಸಿಸಿ ಉಪ ಆಯುಕ್ತ (ಆರೋಗ್ಯ) ಪಿ.ಎನ್.ಮಧುಸೂಧನ್ ರೆಡ್ಡಿ, “ಬಳಕೆಯಾಗದ ವಿತರಣಾ ಬ್ಯಾಗ್ ಗಳನ್ನು ಕಚೇರಿ ಕಟ್ಟಡದ ಟೆರೇಸ್‌ನಲ್ಲಿ ಇರಿಸಲಾಗಿತ್ತು. ನಮ್ಮ ವೆಕ್ಟರ್ ಕಂಟ್ರೋಲ್ ತಂಡವು ಭೇಟಿ ನೀಡಿದಾಗ, ಎಲ್ಲಾ ಚೀಲಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಮಾಡುವ ಮೂಲವಾಗಿರುವುದು ಗಮನಕ್ಕೆ ಬಂದ ಕಾರಣ ದಂಡ ವಿಧಿಸಲಾಗಿದೆ. ಸಂಸ್ಥೆಯೂ ಸಹ ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಿ, ಆವರಣವನ್ನು ಸ್ವಚ್ಛಗೊಳಿಸುವ ಭರವಸೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ. 


ತಮಿಳುನಾಡಿನಲ್ಲಿ ಈಗಾಗಲೇ ಸುಮಾರು 3 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ 10 ರಿಂದ 18 ರವರೆಗೆ ನಡೆಸಿದ ಪರಿಶೀಲನೆಯಲ್ಲಿ ಖಾಸಗಿ, ಸಾರ್ವಜನಿಕ ಮತ್ತು ವಾಣಿಜ್ಯ ಸಂಸ್ಥೆಗಳಿಂದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ 20 ಲಕ್ಷ ರೂ.ದಂಡ ಸಂಗ್ರಹಿಸಿದ್ದು, 387 ಅಪರಾಧಿಗಳಿಗೆ ದಂಡ ವಿಧಿಸಲಾಗಿದೆ. ದಂಡ ವಿಧಿಸಿದವರ ಪಟ್ಟಿಯಲ್ಲಿ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಕೂಡ ಸೇರಿದೆ.