Karnataka Assembly Elections: ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯರಾದ ಸಂಜಯ್‌ ಸಿಂಗ್‌ರವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿ ಗ್ಯಾರೆಂಟಿಗಳ ಪಟ್ಟಿಯನ್ನು ಬುಧವಾರ(ಮಾರ್ಚ್ 29)  ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.


COMMERCIAL BREAK
SCROLL TO CONTINUE READING

ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಜಯ್‌ ಸಿಂಗ್‌, “ಆಮ್‌ ಆದ್ಮಿ ಪಾರ್ಟಿಯು ಸುಳ್ಳು ಆಶ್ವಾಸನೆಗಳನ್ನು ನೀಡುವ ಪಕ್ಷವಲ್ಲ. ನಾವು ಆಶ್ವಾಸನೆಗಳ ಬದಲು ಗ್ಯಾರೆಂಟಿ ಕಾರ್ಡ್ ನೀಡುತ್ತೇವೆ. ಇದೊಂದು ಕರಾರುಪತ್ರವಾಗಿದ್ದು, ಇವೆಲ್ಲವನ್ನೂ ಶೇ. 100ರಷ್ಟು ಈಡೇರಿಸುತ್ತೇವೆ. ಪ್ರಣಾಳಿಕೆಯಲ್ಲಿದ್ದ ಎಲ್ಲ ಗ್ಯಾರೆಂಟಿಗಳನ್ನು ದೆಹಲಿಯಲ್ಲಿ ಈಡೇರಿಸಿದ್ದೇವೆ. ಪಂಜಾಬ್‌ನಲ್ಲಿ ಕೂಡ ಒಂದೊಂದಾಗಿ ಜಾರಿಗೆ ಬರುತ್ತಿದೆ. ಕರ್ನಾಟಕದಲ್ಲಿ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್‌ ಉಚಿತ ವಿದ್ಯುತ್‌, ನಿರುದ್ಯೋಗಿ ಯುವಜನತೆಗೆ ತಿಂಗಳಿಗೆ 3000 ರೂಪಾಯಿ ನಿರುದ್ಯೋಗ ಭತ್ಯೆ, ಗುಣಮಟ್ಟದ ಆರೋಗ್ಯ ಸೇವೆಗಾಗಿ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹಳೆ ಪಿಂಚಣಿ ಯೋಜನೆ ಜಾರಿ ಮುಂತಾದ ಒಟ್ಟು ಹತ್ತು ವಲಯಗಳಿಗೆ ಸಂಬಂಧಿಸಿದ ಪ್ರಮುಖ ಗ್ಯಾರೆಂಟಿಗಳನ್ನು ಇಂದು ಘೋಷಿಸಲಾಗುತ್ತಿದೆ. ಜೊತೆಗೆ, ಬೆಂಗಳೂರು ಹಾಗೂ ರಾಜ್ಯದ ಪ್ರಾದೇಶಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ಯಾರೆಂಟಿಗಳನ್ನು ಘೋಷಿಸುತ್ತಿದ್ದೇವೆ” ಎಂದು ಹೇಳಿದರು.


ಇದನ್ನೂ ಓದಿ- Karnataka Assembly Election 2023: ಒಂದೇ ಹಂತದಲ್ಲಿ ಚುನಾವಣೆ, ಮೇ.10ಕ್ಕೆ ಮತದಾನ, ಮೇ.13ಕ್ಕೆ ಫಲಿತಾಂಶ!


“ಆಮ್‌ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಮೂರನೇ ಬಾರಿ ಹಾಗೂ ಪಂಜಾಬ್‌ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದೆ. ಗೋವಾ ಚುನಾವಣೆಯಲ್ಲಿ ಶೇ. 6ಕ್ಕಿಂತಲೂ ಹೆಚ್ಚು ಮತ ಪಡೆದಿದ್ದೇವೆ. ಗುಜರಾತ್‌ನಲ್ಲಿ ಶೇ. 14ರಷ್ಟು ಮತ ಪಡೆದಿದ್ದು, ಐವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಮ್‌ ಆದ್ಮಿ ಪಾರ್ಟಿಯು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಕಾನೂನಿನ ಪ್ರಕಾರ ಅರ್ಹವಾಗಿದ್ದರೂ ಚುನಾವಣಾ ಆಯೋಗವು ಇನ್ನೂ ಇದನ್ನು ಅಧಿಕೃತವಾಗಿ ಘೋಷಿಸಿಲ್ಲ. ಸ್ಥಾನಮಾನ ಕೋರಿ ನಾವು ಸಲ್ಲಿಸಿದ್ದ ಅರ್ಜಿಯನ್ನು ಹಲವು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ” ಎಂದು ಸಂಜಯ್‌ ಸಿಂಗ್ ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ- ಬಿಜೆಪಿಗೆ ಬಿಸಿ ತುಪ್ಪವಾದ ಒಳಮೀಸಲಾತಿ ಅಸ್ತ್ರ


ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕಳೆದ ಒಂದು ತಿಂಗಳಿನಿಂದ ಪ್ರಣಾಳಿಕೆ ರಚಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ರಾಜ್ಯದ ಮೂಲೆಮೂಲೆಗಳಿಂದ ಈಗಾಗಲೇ ಸಾವಿರಾರು ಸಲಹೆಗಳು ಬಂದಿವೆ. ಬೇರೆಬೇರೆ ವರ್ಗಗಳ ಜನಸಮಾನ್ಯರು, ಯುವಜನತೆ, ಮಹಿಳೆಯರು, ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಜನರಿಂದ ಜನರಿಗಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಯಾವ್ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವೋ ಅವುಗಳನ್ನು ಸೇರಿಸುತ್ತಿದ್ದೇವೆ. ಆಮ್‌ ಆದ್ಮಿ ಪಾರ್ಟಿಯ ಗ್ಯಾರೆಂಟಿಗಳಿಂದಾಗಿ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 8ರಿಂದ 10 ಸಾವಿರ ರೂಪಾಯಿ ಉಳಿತಾಯವಾಗಲಿದೆ. ನಾವು ಇವುಗಳನ್ನು ಗ್ಯಾರೆಂಟಿ ಕಾರ್ಡ್‌ ರೂಪದಲ್ಲಿ ನೀಡುತ್ತಿದ್ದು, ಅಧಿಕಾರಕ್ಕೆ ಬಂದು ನಾವು ಇವುಗಳನ್ನು ಜಾರಿಗೆ ತರದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಜನರಿಗೆ ಅವಕಾಶವಿರುತ್ತದೆ. ರಾಜ್ಯದ ಪ್ರತಿಯೊಂದು ವರ್ಗದ ಜನರ ಸಮಸ್ಯೆಗಳಿಗೆ ಪ್ರಣಾಳಿಕೆಯಲ್ಲಿ ಪರಿಹಾರ ಇರಲಿದೆ” ಎಂದು ಹೇಳಿದರು.


ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಅಶ್ವಿನ್‌ ಮಹೇಶ್‌, ರಾಜ್ಯ ಕಾರ್ಯಾಧ್ಯಕ್ಷ ಮೋಹನ್‌ ದಾಸರಿ ಮತ್ತಿತರರು ಭಾಗವಹಿಸಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.