ಸಾರ್ವಜನಿಕ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ : 5ನೇ ಗ್ಯಾರಂಟಿ ಯೋಜನೆ ಘೋಷಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಇಂದು 5ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ರಾಹುಲ್ ಗಾಂಧಿ ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿದರು
ಮಂಗಳೂರು : ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ. ಇದು ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿ ಯೋಜನೆಯಾಗಿದ್ದು, ಈ ಐದೂ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ಮೊದಿ ಅವರೇ, ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಒಂದು ಸವಾಲು ಹಾಕುತ್ತಿದ್ದೇನೆ. ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ನಾವು ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ನೀವು ದೇಶದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲು ಸಿದ್ಧರಿದ್ದೀರಾ? ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಪಾಟೀಲ್ ಗೆಲ್ಲಿಸಿ, ಅಭಿವೃದ್ಧಿಗೆ ಜೈಕಾರ ಹಾಕಿ : ಸುದೀಪ್ ಕರೆ
ಇದಕ್ಕೂ ಮುನ್ನ ಕಡಲ ಮೀನುಗಾರರ ಜತೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು ಮೀನುಗಾರರ ಹಿತರಕ್ಷಣೆಗೆ ಕೆಲವು ಭರವಸೆಗಳನ್ನು ನೀಡಿದರು.
1. ಹತ್ತು ಲಕ್ಷ ರೂ. ವಿಮೆ
2. ಸೀಮೆಯೆಣ್ಣೆ 250 ರಿಂದ 500 ಲೀಟರಿಗೆ ಏರಿಕೆ
3. ಮೀನುಗಾರ ಕುಟುಂಬದ ಮಹಿಳೆಯರಿಗೆ 1,00,000 ರೂ. ಬಡ್ಡಿ ರಹಿತ ಸಾಲ
4. ಮೀನುಗಾರರಿಗೆ ಡೀಸೆಲ್ ಹಾಗೂ ಪೆಟ್ರೋಲ್ ಮೇಲೆ 25 ರೂ. ಸಬ್ಸಿಡಿ
ಕಳೆದ ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರವನ್ನು ನೀವು ಆರಿಸಲಿಲ್ಲ. ಈ ಸರ್ಕಾರ ನಿಮ್ಮ ಮತದಿಂದ ರಚನೆಯಾಗಿಲ್ಲ. ಈ ಸರ್ಕಾರವನ್ನು ಬಿಜೆಪಿ ಕಳ್ಳತನದ ಮೂಲಕ ರಚಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದು, ಭ್ರಷ್ಟಾಚಾರದ ಹಣದಲ್ಲಿ ಶಾಸಕರನ್ನು ಖರೀದಿ ಮಾಡಿದ್ದಾರೆ, ನಿಮ್ಮ ಸರ್ಕಾರವನ್ನು ನಿಮ್ಮಿಂದಲೇ ಕಳ್ಳತನ ಮಾಡಿದ್ದಾರೆ. ಕಳ್ಳತನ ಇವರಿಗೆ ಅಭ್ಯಾಸವಾಗಿದೆ. ಸರ್ಕಾರವಾಗಲಿ, ಶಾಸಕರಾಗಲಿ, ಗುತ್ತಿಗೆ, ಸಕ್ಕರೆ ಕಾರ್ಖಾನೆ ಎಲ್ಲವನ್ನು ಇವರು ಕದಿಯುತ್ತಾರೆ. ಬಿಜೆಪಿ ನಾಯಕರು ಹೇಳುತ್ತಾರೆ. ಈ ಚುನಾವಣೆ ಕರ್ನಾಟಕವನ್ನು ಮೋದಿ ಕೈಗೆ ಕೊಡುವ ಚುನಾವಣೆ ನೀಡುವುದಾಗಿದೆ ಎಂದು. ಈಗಲೂ ರಾಜ್ಯ ಬಿಜೆಪಿ ಕೈಯಲ್ಲಿದೆ. ಇದು ಭವಿಷ್ಯವನ್ನು ಮೋದಿ ಅವರ ಕೈಗೆ ಕೊಡಿ ಎನ್ನುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇರುವ ಭ್ರಷ್ಟಾಚಾರದ ಸರ್ಕಾರ ಬೇಕಾ? ಇವರು ಯಾವುದೇ ವಿಚಾರದಲ್ಲೂ 40% ಕಮಿಷನ್ ತೆಗೆದುಕೊಳ್ಳುತ್ತಾರೆ. ಬಿಜೆಪಿಯಲ್ಲಿ 2500 ಕೋಟಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂದು ಬಿಜೆಪಿ ಶಾಸಕರೇ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ – ಸಿಎಂ ಬೊಮ್ಮಾಯಿ
ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ ರಾಜ್ಯದಲ್ಲಿ ಎಲ್ಲಾ ಕೆಲಸಗಳಿಗೆ 40% ಕಮಿಷನ್ ಪಡೆಯಲಾಗುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದು, ಆ ಪತ್ರಕ್ಕೆ ಉತ್ತರ ನೀಡುವುದಿರಲಿ, ಆ ಪತ್ರವನ್ನು ಪ್ರಧಾನಿ ಮೋದಿ ಅವರು ಸ್ವೀಕರಿಸಿಲ್ಲ. ದಿಂಗಾಲೇಶ್ವರ ಸ್ವಾಮೀಜಿಗಳು ಬಿಜೆಪಿ ಸರ್ಕಾರ ಮಠಗಳಿಗೆ ವಿನಾಯಿತಿ ನೀಡಿ 30% ಕಮಿಷನ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಬಿಜೆಪಿಯ ಭ್ರಷ್ಟಾಚಾರ ಧರ್ಮ. ಬಿಜೆಪಿ ಶಾಸಕನ ಪುತ್ರ ಲಂಚ ಪಡೆಯುವಾಗ 8 ಕೋಟಿ ಹಣದೊಂದಿಗೆ ಸಿಕ್ಕಿ ಬೀಳುತ್ತಾನೆ. ಈ ಸರ್ಕಾರ ಪಿಎಸ್ಐ, ಸಹಾಯಕ ಪ್ರಾಧ್ಯಾಪಕರು, ಕಿರಿಯ ಇಂಜಿನಿಯರ್ ಸೇರಿದಂತೆ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಸರ್ಕಾರದಲ್ಲಿ ಹಗರಣಗಳ ಸರಮಾಲೆ ಇದೆ. ಒಂದೆಡೆ ಭ್ರಷ್ಟಾಚಾರ, ಮತ್ತೊಂದೆಡೆ ಬೆಲೆ ಏಱಿಕೆ, ನಿರುದ್ಯೋಗ ಸಮಸ್ಯೆ. ಈ ಹಿಂದೆ ಪೆಟ್ರೋಲ್ 60 ರೂ ಇತ್ತು ಈಗ 100 ರೂ ಆಗಿದೆ. ಅಡುಗೆ ಅನಿಲ ಸಿಲಿಂಡರ್ 400 ರೂ. ಇತ್ತು ಇಂದು 1100 ರೂ. ಆಗಿತ್ತು. ಜಿಎಸ್ ಟಿ ಮೂಲಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡಿದೆ. ನೋಟು ರದ್ಧತಿ ಮೂಲಕ ಬಡವರ ಹಣ ಕಿತ್ತು ಶ್ರೀಮಂತ ಉದ್ಯಮಿಗಳ ಕೈಯಲ್ಲಿ ನೀಡಿದ್ದಾರೆ.
ಇಂದು ಯಾವ ಪರಿಸ್ಥಿತಿ ಇದೆ ಎಂದರೆ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಏನೇ ಆದರೂ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. 40 ಕೋಟಿ ಜನ ಮತ್ತೆ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ದೇಶದ ಶೇ.1ರಷ್ಟು ಜನರ ಬಳಿ ದೇಶದ ಶೇ.40 ಸಂಪತ್ತು ಇದೆ. 90 ಲಕ್ಷ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮುಚ್ಚಿವೆ ಇದು ಬಿಜೆಪಿಯ ವಿಕಾಸ. ಭ್ರಷ್ಟಾಚಾರ 40%, ನಿರುದ್ಯೋಗ, ಬೆಲೆ ಏರಿಕೆ ಬಿಜೆಪಿ ಸಾಧನೆ.
ಇದನ್ನೂ ಓದಿ: ದಲಿತರ ವೋಟ್ ಬ್ಯಾಂಕಿಗೋಸ್ಕರ ಅಂಬೇಡ್ಕರ್ ಅವರ ಮೇಲೆ ನಾಟಕದ ಪ್ರೀತಿಯನ್ನು ಬಿಜೆಪಿ ತೋರುಸುತ್ತಿದೆ"-ಖರ್ಗೆ
ಚುನಾವಣೆ ಮುನ್ನ ಕಾಂಗ್ರೆಸ್ ನಾಯಕರೆಲ್ಲ ಭೇಟಿ ಮಾಡಿ ಕಾಂಗ್ರೆಸ್ ಕರ್ನಾಟಕ ರಾಜ್ಯದ ಜನತೆಗೆ ಏನು ನೀಡಬಹುದು ಎಂದು ಕೇಳಿದೆ. ನಾವು ಮಹಿಳೆಯರು, ಯುವಕರು, ಕಾರ್ಮಿಕರು, ರೈತರಿಂದ ಸಲಹೆ ಪಡೆದೆವು. ನಂತರ ನೀವು ನಾಲ್ಕು ಉತ್ತರ ನೀಡಿದಿರಿ. ಮೊದಲು ರಾಜ್ಯದ ಮಹಿಳೆಯರು ಕೊಟ್ಟ ಉತ್ತರಿಂದ ಗೃಹಲಕ್ಷ್ಮಿ ಯೋಜನೆ ರೂಪುಗೊಂಡಿತು. ಈ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡುವುದು. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಖ್ಕಿ ಉಚಿತ. ಯುವನಿಧಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗೆ 3 ಸಾವಿರ, ಡಿಪ್ಲೋಮಾ ಪದವೀಧರ ನಿರುದ್ಯೋಗಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುವುದು. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ಈ ಕೆಲಸಗಳನ್ನು ನಿಷ್ಠಾವಂತ ಸರ್ಕಾರ ಜಾರಿ ಮಾಡಬಹುದು. ಈ ಯೋಜನೆ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಲಾಗುವುದು.
ಪ್ರಧಾನಮಂತ್ರಿಗಳು ಭರವಸೆಗಳನ್ನು ನೀಡುತ್ತಾರೆ. ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ವಿರುದ್ದ ಹೋರಾಟ ಸೇರಿದಂತೆ ಅನೇಕ ಭರವಸೆ ನೀಡಿದರು. ಒಂದನ್ನೂ ಜಾರಿ ಮಾಡಲಿಲ್ಲ. ದೇಶದಲ್ಲಿ ಕಪ್ಪು ಹಣ ಹೆಚ್ಚಾಗಿದೆ, ಈ ಬಗ್ಗೆ ಪ್ರಶ್ನೆ ಮಾಡಿದಾಗ ನನ್ನನ್ನು ಸಂಸತ್ತಿನಿಂದ ಹೊರಹಾಕಿದ್ದಾರೆ. ನಾನು ಪ್ರಧಾನಮಂತ್ರಿಗಳಿಗೆ ಕೇವಲ ನಿಮಗೂ ಹಾಗೂ ಅದಾನಿ ನಡುವಣ ಸಂಬಂಧವೇನು ಎಂದು ಕೇಳಿದೆ. ಅಧಾನಿ ಅವರು ವಿದೇಶಿ ನಕಲಿ ಕಂಪನಿಯಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ. ನನ್ನ ಪ್ರಶ್ನೆಗೆ ಉತ್ತರ ನೀಡದೇ ನನ್ನನ್ನು ಅನರ್ಹ ಮಾಡಿದರು. ಮಾತು ತಪ್ಪುವುದು ಬಿಜೆಪಿಯ ಹವ್ಯಾಸ. ಆದರೆ ನಾವು ಕೊಟ್ಟ ಮಾತನ್ನು ಜಾರಿ ಮಾಡುತ್ತೇವೆ. ಛತ್ತೀಸ್ ಗಢದಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ರೈತರ ಬೆಳೆಗೆ ಸರಿಯಾದ ಬೆಲೆ ನಿಗದಿ ಮಾಡಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ಕೊಟ್ಟ ಭರವಸೆ ಜಾರಿ ಮಾಡಿದ್ದೇವೆ. ನಾವು ಮಾಡಿರುವ ಐದೂ ಯೋಜನೆಗಳನ್ನು ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡುತ್ತೇವೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಸಿನಲ್ಲಿಯೇ ವಿಷವಿದೆ..!
ನಾನು ಪ್ರಧಾನಿಗೆ ಒಂದು ಮಾತು ಕೇಳುತ್ತೇನೆ, ಕರ್ನಾಟಕ ರಾಜ್ಯದ ಜನ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ಕಾಂಗ್ರೆಸ್ ಸರ್ಕಾರ ಈ ನಾಲ್ಕು ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿ ಮಾಡುತ್ತೇವೆ. ನೀವು ದೇಶದಾದ್ಯಂತ ಕಾರ್ಯರೂಪಕ್ಕೆ ನೀವು ಜಾರಿ ಮಾಡುತ್ತೀರಾ? ನೀವು ಬಡವರು, ಯುವಕರು, ರೈತರಿಗೆ ನೀವು ಭರವಸೆಯನ್ನು ಈಡೇರಿಸುವುದಿಲ್ಲ. ಆದರೆ ಅದಾನಿ ಅವರಿಗೆ ನೀವು ನೀಡುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೀರಿ. ಅದಾನಿಗೆ ದೇಶದ ವಿಮಾನ ನಿಲ್ದಾಣ, ಬಂದರು, ರಕ್,ಣಾ ಕ್ಷೇತ್ರ ಎಲ್ಲವನ್ನು ಅವರ ಕೈಗೆ ಕೊಟ್ಟಿದ್ದೀರಿ.
ನನಗೆ ಮಂಗಳೂರಿನ ಜತೆ ಹಳೆಯ ಸಂಬಂಧವಿದೆ. ಇಲ್ಲಿನ ಬಂದರನ್ನು ಇಂದಿರಾಗಾಂಧಿ ಅವರು ನಿರ್ಮಿಸಿದ್ದರು. ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ಪೆಟ್ರೋಲಿಯಂ ಅಂಡ್ ರಿಫೈನರಿ ಸಂಸ್ಥೆ ಕಾಂಗ್ರೆಸ್ ಪಕ್ಷದ ಕೊಡುಗೆ. ನಾಲ್ಕು ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕುಗಳಾದ ಕಾರ್ಪೊರೇಷನ್, ಕೆನರಾ, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಗಳು ಈ ಭಾಗದ ಹೆಮ್ಮೆಯಾಗಿದ್ದವು. ಇದೆಲ್ಲವನ್ನು ಬೇರೆ ಬ್ಯಾಂಕ್ ಜತೆ ಜೋಡಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ ಜಯಭೇರಿ ಬಾರಿಸುತ್ತಿದ್ದು, ಯಾರೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ 40% ಪಕ್ಷವಾಗಿದ್ದು, ಅವರಿಗೆ 40 ಸೀಟು ಮಾತ್ರ ನೀಡಿ. ಕಳೆದ ಸರ್ಕಾರವನ್ನು ಬಿಜೆಪಿ ಕಳ್ಳತನ ಮಾಡಿದ್ದರು ಎಂಬುದನ್ನು ಮರೆಯಬೇಡಿ. ಮೋದಿ ಅವರು ಕಾಂಗ್ರೆಸ್ ಭರವಸೆ ಈಡೇರಿಸುವುದಿಲ್ಲ ಎಂದಿದ್ದಾರೆ. ನಾನು ನಿಮಗೆ ಭರವಸೆ ನೀಡುತ್ತೇನೆ ಮೊದಲ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.