ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬ್ರಹ್ಮಾಸ್ತ್ರಗಳು ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. 


COMMERCIAL BREAK
SCROLL TO CONTINUE READING

ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.


ಸೋಮಣ್ಣ-ವಿಜಯೇಂದ್ರ ಮತ ಶಿಕಾರಿ: ಸಿದ್ದು- ಕಾಂಗ್ರೆಸ್ ವಿರುದ್ಧ ವಾಗ್ದಾಳಿ


ಮೋದಿ ಅವರು ಎಷ್ಟು ಸಲ ರಾಜ್ಯಕ್ಕೆ ಬಂದರೂ ಪ್ರಯೋಜನ ಇಲ್ಲ. ಬಿಜೆಪಿ ಆಡಳಿತ ಎಂತದ್ದು ಎನ್ನುವುದನ್ನ ರಾಜ್ಯದ ಜನರು ನೋಡಿ ಆಗಿದೆ ಎಂದು ಅವರು ಟೀಕಿಸಿದರು.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೇವನಹಳ್ಳಿ ರೋಡ್ ಶೋ ಮಳೆಯ ನೆಪದಿಂದ ರದ್ದಾಗಿದೆ. ಆಸಲಿ ವಿಷಯ ಅದಲ್ಲ, ಜನರೇ ರೋಡ್ ಶೋಗೆ ಬಂದಿಲ್ಲ. ಇವರು ಜನರಿಗೆ ಹಣ ಕೊಡಲು ಹೋದರೆ, ನೀವೇನು ನಮಗೆ ಹಣ ಕೊಡೋದು, ನಾವೇ ಕೊಡುತ್ತೇವೆ ತೆಗೆದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಗೃಹ ಸಚಿವರ ರೋಡ್ ಶೋ ರದ್ದಾಗಿದೆ. ಹಳ್ಳಿಗಳಿಗೆ ಬಸ್ ಕಳಿಸಿದ್ದರೂ ಜನ ಬಂದಿಲ್ಲ. ಬಿಜೆಪಿಯ ಸ್ಥಿತಿ ಹೀಗಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.


ಇದನ್ನೂ ಓದಿ: Photo Gallery: ಮೋದಿ ಏನು ದೇವರಾ? ಮಠಾಧೀಶರಾ? ಅಥವಾ ಛೂಮಂತರ್ ಬಾಬಾನಾ?-ಕಾಂಗ್ರೆಸ್ ಪ್ರಶ್ನೆ


ಬಿಜೆಪಿ ನಾಯಕರು ಮೋದಿ ಅವರ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಹಾಗಾದರೆ ಇವರು ಮಾಡಿದ ಸಾಧನೆ ಏನು? ನಮ್ಮ ಮುಖ ನೋಡಿ ಮತ ಹಾಕಿ ಎಂದು ರಾಜ್ಯದ ಬಿಜೆಪಿ ನಾಯಕರು ಯಾಕೆ ಕೇಳುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.


ಈ ಬಾರಿ ಸರಕಾರ ನಮ್ದೇ:


ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಸರಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪಂಚರತ್ನ ಯೋಜನೆಗಳು ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುತ್ತವೆ. ಹೀಗಾಗಿ ಜೆಡಿಎಸ್ ಪರವಾಗಿ ಮತ ಪರಿವರ್ತನೆ ಆಗಲ್ಲ ಎನ್ನುವುದಕ್ಕೆ ಉತ್ತರ ಸಿಗಲಿದೆ. ಈ ಬಾರಿ ನಮಗೆ ಮತಗಳ ಪರಿವರ್ತನೆ ಆಗುತ್ತದೆ ಎಂದರು.


ಉತ್ತರ ಕರ್ನಾಟಕದಲ್ಲಿ 20ರಿಂದ 30ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆ ವಿಶ್ವಾಸ ನಂಬಿಕೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚು ನಾಯಕರು ಬರುತ್ತಿದ್ದಾರೆ. ಬೇರೆ ಪಕ್ಷಗಳಿಂದ 28 ನಾಯಕರು ಹೊಸದಾಗಿ ನಮ್ಮ ಪಕ್ಷ ಸೇರಿ ಅಭ್ಯರ್ಥಿಗಳಾಗಿದ್ದಾರೆ. ಈ ಎಲ್ಲ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಮೊದಲ 93 ಅಭ್ಯರ್ಥಿಗಳ ಪಟ್ಟಿಯಲ್ಲಿ 90 ಕ್ಷೇತ್ರ ಗೆಲ್ಲುತ್ತೇವೆ. ಬಹುಮತದ ಸರಕಾರ ಬರುತ್ತದೆ, 123 ಗುರಿ ಮುಟ್ಟುತ್ತವೆ ಎನ್ನುವ ನಂಬಿಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.


ಪಂಚರತ್ನ ಯೋಜನೆಗಳ ಬಗ್ಗೆ ಜನತೆಗೆ ನಂಬಿಕೆ ವಿಶ್ವಾಸ ಬಂದಿದೆ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಅದನ್ನು ಕೆಲವರು ಲಘುವಾಗಿ ನೋಡುತ್ತಿದ್ದಾರೆ.  ಚುನಾವಣೆ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ ನಮ್ಮ ಪಕ್ಷದ ಶಕ್ತಿ ಏನೆಂಬುದು ಎಂದು ಅವರು ತಿಳಿಸಿದರು.


ಶನಿವಾರದಿಂದ ಮೇ 8ರ ಸಂಜೆವರೆಗೆ ನಿರಂತರವಾಗಿ ಪ್ರವಾಸ ಮಾಡುತ್ತೇನೆ. ದಿನಕ್ಕೆ 8 ರಿಂದ 10 ಕ್ಷೇತ್ರಗಳಿಗೆ ಹೋಗುತ್ತೇನೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ  ಇಬ್ರಾಹಿಂ ಅವರೂ ಪ್ರಚಾರಕ್ಕೆ ಹೋಗುತ್ತಾರೆ ಎಂದ ಅವರು; 8 ರಿಂದ 10 ವಿಧಾನಸಭೆ ಕ್ಷೇತ್ರಗಳನ್ನು ಬೆಂಗಳೂರಿನಲ್ಲಿಯೇ ಗೆಲ್ಲುತ್ತೇವೆ, ಬೆಳಗಾವಿಯಲ್ಲಿ ಕನಿಷ್ಠ 6 ಕ್ಷೇತ್ರ ಗೆಲ್ಕುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.


ಇದನ್ನೂ ಓದಿ: Karnataka Election Photos : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌..! ಡಿಕೆಶಿ ನಾಮಪತ್ರ ಅಂಗೀಕಾರ


ಕಾಂಗ್ರೆಸ್ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಅದೇ ರೀತಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಯಾರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಬೊಮ್ಮಾಯಿ ಅವರು ಸ್ಪರ್ಧಿಸಿರುವ ಶಿಗ್ಗಾಂವಿಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನೇ ಹಾಕಿದ್ದೇವೆ. ಕೇವಲ ರಾಜಕೀಯಕ್ಕಾಗಿ ನಮ್ಮ ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.


ಮಾಜಿ ಶಾಸಕ ಪ್ರಸನ್ನಕುಮಾರ್ & ಬೆಂಬಲಿಗರು ಜೆಡಿಎಸ್ ಸೇರ್ಪಡೆ:


ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಅವರು ಜೆಡಿಎಸ್ ಪಕ್ಷಕ್ಕೆ ಬರ ಮಾಡಿಕೊಂಡರು.


ಅವರ ಜತೆಗೆ ಶಿವಮೊಗ್ಗದ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಕಾರ್ಪೊರೇಟರ್ ಗಳಾದ ಬೊಮ್ಮಘಟ್ಟ ಮಂಜುನಾಥ್, ರಘು ಹಾಗೂ ಮುಖಂಡರಾದ ಸುನೀಲ ಗೌಡ, ಸುನಿಲ್, ಪ್ರಸನ್ನ ಮುಂತಾದವರು ಜೆಡಿಎಸ್ ಪಕ್ಷ ಸೇರಿದರು.


ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್ ಹಾಗೂ ಬೆಂಗಳೂರು ನಗರ ಘಟಕದ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.