ಬೆಂಗಳೂರಿನಲಿ 2217 ಬೂತ್ ಗಳು ಅತಿ ಸೂಕ್ಷ್ಮ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
Karnataka Assembly Election: ಚುನಾವಣಾ ಕರ್ತವ್ಯದಲ್ಲಿರುವ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಚುನಾವಣಾ ತರಬೇತಿ ನೀಡಲಾಗಿದೆ. ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ಜಾಗದ ಕೊರತೆ ಇತ್ತು, ಇದನ್ನು ನಿವಾರಿಸಲಾಗಿದೆ. ಆರ್.ಓ, ಎ. ಆರ್. ಓ ಗಳು ಆಯಾ ವಿಧಾನಸಭಾ ಕ್ಷೇತ್ರದ ಎಲ್ಲ ಕೆಲಸಗಳಿಗೆ ಜವಬ್ದಾರರಾಗುತ್ತಾರೆ. ಜಿಲ್ಲಾಮಟ್ಟದಲ್ಲಿ ಮೇಲ್ಮಟ್ಟದ ಸಮಿತಿ ಇರಲಿದೆ ಎಂದು ಅವರು ತಿಳಿಸಿದರು.
Karnataka Assembly Election 2023: ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 8615 ಬೂತ್ ಗಳಿದ್ದು, 2217 ಬೂತ್ ಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಎಲ್ಲ ಬೂತ್ ಗಳಲ್ಲಿ ಅಂಗವಿಕಲರು ಬಂದು ಹೋಗಲು ಪ್ರತ್ಯೇಕ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್, ಪೀಠೋಪಕರಣಗಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು ಇರಲಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬುಧವಾರ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಚುನಾವಣಾ ಅಧಿಕಾರಿ, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ನಗರ ವ್ಯಾಪ್ತಿಯ 28 ಕ್ಷೇತ್ರಗಳಿಗೆ ಆರ್.ಓ, ಎ. ಆರ್. ಓ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಚುನಾವಣಾ ಕರ್ತವ್ಯದಲ್ಲಿರುವ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಚುನಾವಣಾ ತರಬೇತಿ ನೀಡಲಾಗಿದೆ. ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ಜಾಗದ ಕೊರತೆ ಇತ್ತು, ಇದನ್ನು ನಿವಾರಿಸಲಾಗಿದೆ. ಆರ್.ಓ, ಎ. ಆರ್. ಓ ಗಳು ಆಯಾ ವಿಧಾನಸಭಾ ಕ್ಷೇತ್ರದ ಎಲ್ಲ ಕೆಲಸಗಳಿಗೆ ಜವಬ್ದಾರರಾಗುತ್ತಾರೆ. ಜಿಲ್ಲಾಮಟ್ಟದಲ್ಲಿ ಮೇಲ್ಮಟ್ಟದ ಸಮಿತಿ ಇರಲಿದೆ ಎಂದು ಅವರು ತಿಳಿಸಿದರು.
ಸೂಕ್ಷ್ಮ ಪ್ರದೇಶದಲ್ಲಿ ಇಬ್ಬರು ಅಧಿಕಾರಿಗಳು:
ಸೂಕ್ಷ್ಮ ಪ್ರದೇಶದಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ನಮ್ಮ ರಾಜ್ಯದಲ್ಲೇ ಇರುವ ಅಧಿಕಾರಿಗಳನ್ನು ಕೂಡ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಉಳಿದಂತೆ ಚುನಾವಣೆಯ ದಿನ ಮೈಕ್ರೋ ಅಬ್ಸವರ್ಸ್, ವಿಡಿಯೋ ಕವರಜ್ ಕೂಡ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ- ಚಾಮರಾಜನಗರದಲ್ಲಿ ಮಹಿಳಾ ಮತದಾರರೇ ಅಧಿಕ: ಹೊಸ ವೋಟರ್ಸ್ 12 ಸಾವಿರ
ಮತದಾರರ ಪಟ್ಟಿ ತಿದ್ದುಪಡಿಗೆ ಅವಕಾಶ:
ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 95,13,830 ಮತದಾರರಿದ್ದಾರೆ. ಇದರಲ್ಲಿ 49,26,270 ಪುರುಷ ಮತದಾರರಾಗಿದ್ದು, 45,85,824 ಮಹಿಳಾ ಮತದಾರರು ಇದ್ದಾರೆ. 18 ರಿಂದ 19 ವಯಸ್ಸಿನ 1,08,494 ಮಾತದಾರರು ಸೇರ್ಪಡೆಯಾಗಿದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 2,36,719 ಇದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಮನ್ವಯದಲ್ಲಿ ಬೆಂಗಳೂರು ನಗರ ಜಿಲ್ಲೆಯ ಬಹುತೇಕ ಎಲ್ಲಾ ತೃತೀಯ ಲಿಂಗಿ ಮತದಾರರ ನೋಂದಣಿ ಕಾರ್ಯ ಯಶಸ್ವಿಯಾಗಿದೆ. 9182 ಮತದಾರರ ಪೈಕಿ 9125 ಮತದಾರರು ನೋಂದಣಿಯಾಗಿದ್ದರೆ, 42 ಮತದಾರರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೇವಲ 15 ಜನರ ನೋಂದಣಿಗೆ ಬಾಕಿ ಉಳಿದಿದೆ. ನಾಮಿನೇಷನ್ ಮಾಡುವ ದಿನದವರೆಗೂ ಮತದಾರರ ಪಟ್ಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾನದ ಮಾಹಿತಿಗೆ ಆಪ್:
ಯಶವಂತಪುರ, ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿನಗರ ಸೇರಿದಂತೆ 19 ಕ್ಷೇತ್ರಗಳಲ್ಲಿ ವೆಚ್ಚ ಜಾಸ್ತಿ ಇದೆ. ಆಪ್ ಕೂಡ ತರಲು ಹೊರಟಿದ್ದೇವೆ. ಮತ ಕಟ್ಟೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಿದ್ದೇವೆ. ಬೂತ್ ಬಳಿ ಇರುವ ಸರಿತಿ ಸಾಲು, ದೂರ ಎಲ್ಲವನ್ನು ಮಾನಿಟರ್ ಮಾಡಲಾಗುತ್ತದೆ. ಆಪ್ ತರಲಾಗುತ್ತಿದ್ದು, ಅದು ಮತದಾನದ ಕುರಿತು ಸಂಪೂರ್ಣ ಮಾಹಿತಿ ನೇರ ಪ್ರಸಾರದಲ್ಲಿ ನೀಡಲಿದೆ ಎಂದು ಹೇಳಿದರು.
ಚುನಾವಣಾ ಅಕ್ರಮ ತಡೆಯಲು ಚೆಕ್ ಪೋಸ್ಟ್:
ಜಿಲ್ಲಾ ಗಡಿಯಲ್ಲಿ ಒಳ ಹೋಗುವ ಹೋರ ಬರುವ ವಾಹನಗಳ ಮೇಲೆ ನಿಗಾ ಇಡಲು 11 ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ನಗರದ ವ್ಯಾಪ್ತಿಯಲ್ಲಿ 15 ಕಡೆ, ತಮಿಳುನಾಡು ಗಡಿಯಲ್ಲಿ 8 ಚೆಕ್ ಪೋಸ್ಟ್ ಇರಲಿದೆ. ಉಸ್ತುವಾರಿಯನ್ನು ಆಯಾ ವ್ಯಾಪ್ತಿಯ ಡಿ.ಸಿ.ಪಿ ಗಳಿಗೆ ನೀಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ರ್ಯಾಂಡಮ್ ಚೆಕ್ ಅಪ್ ನಡೆಯಲಿದೆ.
ಮಾಧ್ಯಮಗಳ ಮೇಲೆ ನಿಗಾ:
ಗ್ರೀನ್ ಕಲರ್ ಇವಿಎಂ ವೋಟಿಂಗ್ ಗೆ ಬಳಕೆಯಾಗುತ್ತದೆ, ಯೆಲ್ಲೋ ಕಲರ್ ಇರುವ ಇವಿಎಂ ತರಬೇತಿ ನೀಡುವ ಸಲುವಾಗಿ ಬಳಸಲಾಗುತ್ತದೆ. ಯಾವ ಪಕ್ಷಕ್ಕೂ ಮನೆ ಮನೆಗೆ ಹೋಗಿ ವಿವರಣೆ ಪಡೆಯಲು ಅವಕಾಶವಿಲ್ಲ. ಈಗಾಗಲೇ ಮಹಾದೇವಪುರದಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಲಾಗಿದೆ. ಸುದ್ದಿ ಮತ್ತು ಜಾಹೀರಾತುಗಳ ಹೆಸರಲ್ಲಿ ಅಭ್ಯರ್ಥಿಗಳ ಪ್ರಚಾರ ನಡೆಸುವಂತಿಲ್ಲ. ಈ ಹಿನ್ನಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ನಿಗಾ ಇಡಲು ಸಮಿತಿ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ- "ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು?"
ಅಕ್ರಮ ತಡೆಯುವ ಕಾರ್ಯಚರಣೆ ಚರುಕು:
ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಚುನಾವಣಾ ಅಕ್ರಮದ ಕುರಿತು ಕಾರ್ಯಾಚರಣೆ ಆರಂಭಿಸಿದ್ದೇವೆ. ಬ್ಯಾಟರಾಯನಪುರದಲ್ಲಿ 3 ಕೋಟಿ 66 ಲಕ್ಷ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಎಫ್. ಐ. ಆರ್ ಕೂಡ ದಾಖಲಾಗಿದೆ. ಇಂದಿನಿಂದ ಕೋಡ್ ಆಫ್ ಕಂಡೆಕ್ಟ್ ಜಾರಿಯಾಗಿದ್ದು ಈ ಹಿನ್ನಲೆಯಲ್ಲಿ ಅಕ್ರಮದ ಬಗ್ಗೆ ಕಾರ್ಯಾಚರಣೆ ತೀವ್ರಗೊಳಿಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ದಯಾನಂದ್, ಲಿಂಗಮೂರ್ತಿ, ಡಾ. ಜಗದೀಶ್ ಕೆ. ನಾಯ್ಕ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.