Karnataka Assembly Election 2023: ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚಾಮರಾಜನಗರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಚಾಮರಾಜನಗರ ಟಿಕೆಟ್ ಆಕಾಂಕ್ಷಿ ರುದ್ರೇಶ್ ಅವರು ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ. 


COMMERCIAL BREAK
SCROLL TO CONTINUE READING

ಚಾಮರಾಜನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್, ರಾಮನಗರದಲ್ಲಾಗಲಿ ಹಾಗೂ ಚಾಮರಾಜನಗರದಲ್ಲಾಗಲಿ ವಿ. ಸೋಮಣ್ಣ ಅವರು ಪಕ್ಷ ಸಂಘಟನೆಗೆ ಒಂದಿಂಚೂ ಶ್ರಮಿಸಿಲ್ಲ, ಅವರ ತವರಲ್ಲೇ ಅವರು ಪಕ್ಷ ಸಂಘಟಿಸಿಲ್ಲ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿಲ್ಲ ಈ ರೀತಿ ವ್ಯಕ್ತಿಗೆ ಎರಡು ಟಿಕೆಟ್ ಕೊಟ್ಟಿದ್ದಾರೆ ಎಂದು ಹರಿಹಾಯ್ದರು. 


ಪಕ್ಷ ಸಂಘಟನೆಗೆ ಕರೆದರೇ ನನಗೂ ಬಿಜೆಪಿಗೂ ಸಂಬಂಧವಿಲ್ಲ, ನಾನು ಸರ್ಕಾರದ ಸಚಿವ ಎಂದು ಹೇಳುತ್ತಿದ್ದರು. ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದ ಸೋಮಣ್ಣ ಅವರು ಕೆಲ ಷರತ್ತುಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ಸೋಮಣ್ಣ ಅವರು ಕಾರಣ, ಈಗ ಸೋಮಣ್ಣ ಅವರೇ ಅಭ್ಯರ್ಥಿಯಾಗಿರುವುದು ವಿಪರ್ಯಾಸ ಎಂದು ಬೇಸರ ಹೊರಹಾಕಿದರು.


ಇದನ್ನೂ ಓದಿ- ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ: ಕಾಂಗ್ರೆಸ್


ಕಳೆದ ಸಾರಿ ಪ್ರೊ.ಮಲ್ಲಿಕಾರ್ಜುನಪ್ಪ ಸೋಲಲು ಸೋಮಣ್ಣ ಕಾರಣ, ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಕೂಡ ಇದೆ. ಚಾಮರಾಜನಗರದಲ್ಲಿ ಎಲ್ಲರನ್ನೂ ಸೋಲಿಸಿ ಅವರೂ ಮಾತ್ರ ಗೆಲ್ಲುತ್ತಾರೆ, ಗೆದ್ದ ಬಳಿಕ ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ಕಾಂಗ್ರೆಸ್ ಗೆ ಹೋಗುತ್ತಾರೆಂಬ ಅನುಮಾನ ಇದೆ ಗಂಭೀರ ಆರೋಪವನ್ನು ಮಾಡಿದ್ದಾರೆ. 


ಸೋಮಣ್ಣ ಕಾಂಗ್ರೆಸ್ ಗೆ ಹೋಗದಂತೆ ಈಗಲೇ ಹೈಕಮಾಂಡ್ ಬಿಗಿ ಮಾಡಬೇಕಿದೆ. ಮುಂದೊಂದು ದಿನ ಪಕ್ಷಕ್ಕೆ ಕೆಟ್ಟ ದಿನ ಬರಬಾರದು, ಅವರು ಮಾತನಾಡುವುದಲ್ಲ ಬರೀ ಸುಳ್ಳು, ಸುಳ್ಳು ಸೋಮಣ್ಣ ಎಂತಲೇ ಜನರು ಕರೆದಿದ್ದಾರೆ ಎಂದು ಲೇವಡಿ ಮಾಡಿದರು.


ಪಕ್ಷದ ಮಹಾನ್ ನಾಯಕ ಬಿ‌.ಎಸ್‌.ಯಡಿಯೂರಪ್ಪ ವಿರುದ್ಧವಾಗಿ ಕಾರ್ಯಕರ್ತರ ಜೊತೆ ಮಾತನಾಡುತ್ತಾರೆ. ಅದರ ಆಡಿಯೋಗಳು ನನ್ನ ಬಳಿ ಇದೆ, ಸಿದ್ಧಗಂಗಾಶ್ರೀಗಳ ವಿರುದ್ಧವಾಗಿಯೂ ಮಾತನಾಡಿದ್ದಾರೆ. ಅದರ ಆಡಿಯೋ ಕೂಡ ಇದೆ‌. ಶೀಘ್ರದಲ್ಲೇ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದು ರುದ್ರೇಶ್ ಬಾಂಬ್ ಸಿಡಿಸಿದ್ದಾರೆ. 


ಲಿಂಗಾಯತ ಸಮಾಜದ ಅನಭಿಷಿಕ್ತ ದೊರೆ, ಸ್ವಯಂ ಘೋಷಿತ ನಾಯಕ ಎಂದು ಹೇಳಿಕೊಂಡು ತಿರುಗುತ್ತಾರೆ. ಎಲ್ಲಾ ಲಿಂಗಾಯತ ನಾಯಕರನ್ನು ತುಳಿದಿದಿದ್ದಾರೆ, ಬೆಂಕಿ ಮಹಾದೇವಪ್ಪ, ಸಿ‌. ಗುರುಸ್ವಾಮಿ, ಪ್ರೊ. ಮಲ್ಲಿಕಾರ್ಜುನಪ್ಪ, ಪ್ರೀತನ್ ನಾಗಪ್ಪ, ಪರಮಶಿವತಯ್ಯ ಎಲ್ಲರನ್ನೂ ತುಳಿದು , ಈಗ ನನ್ನ ತಲೆ ಮೇಲೆ ಕಾಲಿಡಲು ಬಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.


ಇದನ್ನೂ ಓದಿ- ಬಿಬಿಎಂಪಿ ಅಧಿಕಾರಿಗಳಿಂದ ಎಲೆಕ್ಷನ್ ಜಾಥಾ


ಸೋಮಣ್ಣ ಅವರು ಮಹಾನ್ ನಾಯಕರು, ಅವರಿಗೆ ನಿಜವಾಗಿಯೂ ತಾಖತ್ ಇದ್ದರೇ ವರುಣದಲ್ಲಿ ಮಾತ್ರ ಸ್ಪರ್ಧಿಸಿ ಗೆದ್ದು ಬರಲಿ. ಇಲ್ಲಾ ಕಾರ್ಯಕರ್ತರಿಗೆ ಕೊಡಲಿ, ನಾವು ತೋರಿಸುತ್ತೇವೆ ನಮ್ಮ ಬಲವನ್ನು, ಹೈಕಮಾಂಡ್  ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ಟಿಕೆಟ್ ಪ್ರಕಟವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು.


ಸಿದ್ದರಾಮಯ್ಯ ಪರಮೋಚ್ಛ ನಾಯಕರು ಅಂಥಾರೆ, ಡಿಕೆಶಿ ಅವರು ಸಿಎಂ ಆಗಲಿ ಎನ್ನುತ್ತಾರೆ‌. ವರುಣದಲ್ಲಿ ಸುಮ್ಮನೆ ನಾಮಿನೇಷನ್ ಸಲ್ಲಿಸಿ ವಾಪಾಸ್ ಆಗುತ್ತಾರೆ, ಯಾರೋ ಕಟ್ಟಿದ ಮನೆಗೆ ಇವರು ಗೃಹ ಪ್ರವೇಶ ಮಾಡಿ ಬಳಿಕ ಮನೆಯನ್ನು ಧ್ವಂಸ ಮಾಡುತ್ತಾರೆ.  ಈ ಕೆಲಸ ಆಗಬಾರದೆಂದರೆ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.


ಪಕ್ಷೇತರವಾಗಿ ನಿಲ್ಲಬೇಕೆಂದು ಅಭಿಮಾನಿಗಳು ಒತ್ತಡ ತಂದಿದ್ದಾರೆ, ಗುರುವಾರ ಈ ಸಂಬಂಧ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವೆ ಎಂದು ತಿಳಿಸಿದರು.


ಇದೇ ವೇಳೆ ಸೋಮಣ್ಣ ಹಾಗೂ ಯಡಿಯೂರಪ್ಪ ಭೇಟಿ ಬಗ್ಗೆ ಮಾತನಾಡಿ, ಕಾರ್ಯಕರ್ತರ ಜೊತೆ ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ, ಬಳಿಕ ಹೋಗಿ ಅಲ್ಲಿ ಕೈ ಕಟ್ಟಿ ನಿಲ್ಲುತ್ತಾರೆ. ನನಗೇ ಇದನ್ನು ನೋಡಲು ನಾಚಿಕೆ ಆಗಲಿದೆ ಎಂದು ಲೇವಡಿ ಮಾಡಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.