ಬೆಂಗಳೂರು:  ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಟಾರ್ಗೆಟ್‌ ನೀಡಿದರು. 


COMMERCIAL BREAK
SCROLL TO CONTINUE READING

ಇಂದು ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಇಲಾಖೆಯ ಕಾರ್ಯಕ್ರಮಗಳು, ಅನುಷ್ಠಾನ ಕುರಿತು ಸಮಗ್ರ ಮಾಹಿತಿ ಪಡೆದು, ಕೆಲವು ಸೂಚನೆಗಳನ್ನು ನೀಡಿದರು.


ಪ್ರತಿ ಗ್ರಾಮ ಪಂಚಾಯಿತಿಗೆ ಎರಡರಂತೆ ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳನ್ನು ರಚಿಸಲು ನಿರ್ಧರಿಸಲಾಗಿದ್ದು, ಸುಮಾರು 12 ಸಾವಿರ ಗುಂಪುಗಳನ್ನು ರಚನೆ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಸ್ಥಳೀಯ ಬೇಡಿಕೆಯನ್ನಾಧರಿಸಿ ಎಲ್ಲಾ ಸ್ವಸಹಾಯಗಳ ಕಾರ್ಯಚಟುವಟಿಕೆ ಆರಂಭಿಸಬೇಕು. ಹಾಗೂ 12000 ಯುವ ಸಂಘಗಳನ್ನು ನವೋದ್ಯಮಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು. 


ಇದರ ಜೊತೆಗೆ ಜಿಲ್ಲೆ ಮತ್ತು ತಾಲೂಕುಗಳಲ್ಲಿರುವ ಕ್ರೀಡಾಂಗಣಗಳನ್ನು ಸುಸ್ಥಿತಿಯಲ್ಲಿಡಬೇಕು‌. ಕ್ರೀಡಾ ವಸತಿ ನಿಲಯಗಳಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟದ ಆಹಾರ ನೀಡಬೇಕು. ಯಾವುದೇ ರೀತಿಯ ದೂರುಗಳು ಬರದಂತೆ ಕ್ರಮವಹಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು. 


504 ಕೋಟಿ ಮೊತ್ತದ ಕ್ರೀಡಾ ಅಂಕಣ ಯೋಜನೆ ದೇಶದಲ್ಲೇ ಮಾದರಿಯಾಗಿದ್ದು ಈ ಯೋಜನೆಯಲ್ಲಿ ಆಯ್ಕೆಯಾಗಿರುವ ಕ್ರೀಡಾಂಗಣಗಳ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. 


 176 ತಾಲೂಕುಗಳಿಗೆ ಕೋಚ್‌ ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ. ಕರಡು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಮೋದನೆ ಪಡೆದು ಶೀಘ್ರದಲ್ಲೇ ನೇಮಕಾತಿ ನಡೆಸುವ ಕುರಿತು ಸಚಿವ ಡಾ.ನಾರಾಯಣಗೌಡ ಅವರು ಚರ್ಚಿಸಿದರು. ಇದರ ಜೊತೆಗೆ ಅಮೃತ ಕ್ರೀಡಾದತ್ತು ಯೋಜನೆಯ ಪ್ರಗತಿ, ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ಅಭಿವೃದ್ಧಿ ಕಾಮಗಾರಿ ಹಾಗೂ ತರಬೇತಿ ಸೇರಿದಂತೆ ಇಲಾಖೆಯ ಹಲವು ವಿಚಾರಗಳ ಕುರಿತು ಇವತ್ತಿನ ಸಭೆಯಲ್ಲಿ ಪ್ರಗತಿ ಪರಿಶೀಲಿಸಿದರು.


ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಮುಲೈ ಮುಹಿಲನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.