ಬೆಂಗಳೂರು:  ಸೋಮವಾರದಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿಶ್ವಾಸ ಮತಯಾಚನೆ ಹಿನ್ನಲೆಯಲ್ಲಿ ಈಗ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ತುರ್ತು ಸುದ್ದಿಗೋಷ್ಠಿಯನ್ನು ಕರೆದು 14 ಶಾಸಕರನ್ನು ಅನರ್ಹಗೊಳಿಸಿದ್ದಾರೆ.



COMMERCIAL BREAK
SCROLL TO CONTINUE READING

ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ' ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕಲಾಗಿದೆ.ಮಾನಸಿಕವಾಗಿ ಖಿನ್ನನಾಗಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಅಬ್ದುಲ್ ನಜೀರ್ ಸಾಬ್, ಬಿ ಮೊಯಿದ್ದೀನ್, ಎ.ಕೆ ಸುಬ್ಬಯ್ಯ, ತುಳಸಿ ದಾಸಪ್ಪ ಅವರಂತಹ ವ್ಯಕ್ತಿಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಅವರು ನನ್ನನ್ನು ರೂಪಿಸಿದ್ದಾರೆ.ಇದು ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದ ಪ್ರಮುಖ ಘಟ್ಟ ಬಹುಶಃ ಕೊನೆಯ ಘಟ್ಟವೂ ಆಗಬಹುದು. ಅತ್ಯಂತ ಭಯ,ಗೌರವ,ಜವಾಬ್ದಾರಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ನಾನು ಈ ತಿರ್ಮಾನಕ್ಕೆ ಬಂದಿದ್ದೇನೆ 'ಎಂದು ಹೇಳಿ ಅನರ್ಹಗೊಂಡಿರುವ ಶಾಸಕರ ಹೆಸರನ್ನು ಸ್ಪೀಕರ್ ಓದಿದರು. 



 ಈಗ ಅನರ್ಹಗೊಂಡಿರುವ ಶಾಸಕರಲ್ಲಿ ಎಸ್.ಟಿ.ಸೋಮಶೇಖರ್,ಬಿಸಿ ಪಾಟೀಲ್, ಭೈರತಿ ಬಸವರಾಜ್, ಶಿವರಾಂ ಹೆಬ್ಬಾರ್ ,ರೋಶನ್ ಬೇಗ್ ,ಮುನಿರತ್ನ,ಎಚ್.ವಿಶ್ವನಾಥ್ ,ಪ್ರತಾಪ್ ಗೌಡ ಪಾಟೀಲ್ ,ಡಾ.ಕೆ.ಸುಧಾಕರ್ ,ಆನಂದ್ ಸಿಂಗ್, ಕೆ.ಸಿ.ನಾರಾಯಣಗೌಡ ,ಕೆ ಗೋಪಾಲಯ್ಯ,ಎಂ ಟಿ ಬಿ ನಾಗರಾಜ್ ಶ್ರೀಮಂತ್ ಪಾಟೀಲ್ ಅವರು ಸೇರಿದ್ದಾರೆ. 



ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿಕೊಂಡ ಈ ಹಿನ್ನಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಈಗ ಎಲ್ಲ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಆ ಮೂಲಕ  ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಅತೃಪ್ತ ಶಾಸಕರಿಗೆ ಈಗ ಒಮ್ಮೆಗೆ ಶಾಕ್ ನೀಡಿದ್ದಾರೆ.  ಈಗ ಸ್ಪೀಕರ್ ಅವರ ಅನರ್ಹತೆ ಆದೇಶ ಇಂದಿನಿಂದ ಪ್ರಸಕ್ತ ವಿಧಾನಸಭಾ ಅವಧಿ ಮುಗಿಯುವವರೆಗೆ ಅನ್ವಯವಾಗಲಿದೆ.