ಬೆಂಗಳೂರು: ಕಾಸಿಗಾಗಿ ಪೋಸ್ಟಿಂಗ್‌, ಗುತ್ತಿಗೆದಾರರಿಂದ ಹಣ ಸುಲಿಗೆ ಸೇರಿ ಕಾಂಗ್ರೆಸ್‌ ಸರಕಾರದ ಮೇಲೆ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ರಿಯಲ್‌ ಎಸ್ಟೇಟ್‌ ಬಿಲ್ಡರುಗಳಿಂದ ಈ ಸರಕಾರದ ಪ್ರಭಾವಿಗಳು 2,000 ರೂಪಾಯಿ ಸುಲಿಗೆ ಮಾಡಲು ಹೊರಟಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ ಪಕ್ಷದ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಬೆಂಗಳೂರಿನಲ್ಲಿ ದೊಡ್ಡ ಬಿಲ್ಡರುಗಳ ಸಭೆ ಮಾಡಿರುವ ಪ್ರಭಾವಿಗಳು, ಲೋಕಸಭೆ ಚುನಾವಣೆಯ ನೆಪ ಇಟ್ಟುಕೊಂಡು ಬಿಲ್ಡರುಗಳಿಂದ ಪ್ರತೀ ಚದರ ಅಡಿಗೆ 100 ರೂಪಾಯಿ ಲೆಕ್ಕದಲ್ಲಿ ವಸೂಲಿಗೆ ಇಳಿದಿದ್ದಾರೆ. ಆ ಮೂಲಕ ಭರ್ತಿ 2,000 ಕೋಟಿ ರೂಪಾಯಿ ಸಂಗ್ರಹಕ್ಕೆ ಗುರಿ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.


ಹೆಸರಿಗೆ ʼಇಂಡಿಯಾʼ ಎಂದು ಕೂಟ ಮಾಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿಯೇ ನಾಮಕರಣ ಮಾಡಿಕೊಂಡರು. ಈಗ ಅದೇ ʼಇಂಡಿಯಾʼ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಟಿದ್ದಾರೆ. ಬಿಲ್ಡರುಗಳ ಸಭೆ ನಡೆಸಿ ಇಷ್ಟಿಷ್ಟು ಕಪ್ಪ ಒಪ್ಪಿಸಲೇಬೇಕು ಎಂದು ಡಿಮಾಂಡ್‌ ಮಾಡಿದ್ದಾರೆ. ಅವರಿಗೆ ಜನರು ಪೆನ್ನು ಪೇಪರ್‌ ಕೊಟ್ಟಿದ್ದು ಈ ರೀತಿ ಸುಲಿಗೆ ಮಾಡಲಿಕ್ಕಾಗಿಯೇ ಎಂದು ಯಾರ ಹೆಸರನ್ನೂ ಹೇಳದೇ ದೂರಿದರು ಮಾಜಿ ಮುಖ್ಯಮಂತ್ರಿಗಳು.


ನೈಸ್‌ ಅಕ್ರಮದಲ್ಲಿ 2-3 ಲಕ್ಷ ಕೋಟಿ ಮೌಲ್ಯದ ಭೂಮಿ ಗುಳುಂ: 


ಬೆಂಗಳೂರು-ಮೈಸೂರು ಮೂಲಭೂತ ಕಾರಿಡಾರ್‌ ಯೋಜನೆ (ನೈಸ್‌ ರಸ್ತೆ) ಬಹುಕೋಟಿ ರೂಪಾಯಿಗಳ ಅತಿದೊಡ್ಡ ಹಗರಣವಾಗಿದ್ದು, ಸುಮಾರು 2-3 ಲಕ್ಷ ಕೋಟಿ ರೂ. ಮೌಲ್ಯದ ಭೂಮಿಯನ್ನು ಪಟ್ಟಭದ್ರರು ನುಂಗಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.


ರೈತರಿಂದ ಕಸಿದುಕೊಂಡಿರುವ ಈ ಭೂಮಿಯನ್ನು ವಾಪಸ್‌ ಪಡೆದು ರೈತರಿಗೆ ಮರು ಹಸ್ತಾಂತರ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರಲ್ಲದೆ; ನೈಸ್‌ ಭೂ ಕರ್ಮಕಾಂಡದಲ್ಲಿ ಈ ಸರಕಾರದ ಪ್ರಭಾವೀ ಸಚಿವರೊಬ್ಬರು ನೇರವಾಗಿ ಶಾಮೀಲಾಗಿದ್ದಾರೆ. ಆ ಕಂಪನಿ ಜತೆ ಕೈಜೋಡಿಸಿ ಸಾವಿರಾರು ಕೋಟಿ ರೂ. ಬೆಲೆಯ ರೈತರ ಭೂಮಿಯನ್ನು ಲೂಟಿ ಮಾಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು. 


ನನಗೂ ಒಮ್ಮೆ ಪೆನ್ನು ಪೇಪರ್‌ ಕೊಡಿ ಎಂದು ಚುನಾವಣೆಗೂ ಮುನ್ನ ಜನರಿಗೆ ದುಂಬಾಲು ಬಿದ್ದಿದ್ದರು ಅವರು ಎಂದು ಪದೇಪದೆ ಕೆಣಕಿದ ಅವರು; ಪೆನ್ನು, ಪೇಪರ್ ಸಿಕ್ಕಿದ ಮೇಲೆ ಜನರ ಸಂಪತ್ತನ್ನು ಎಗ್ಗಿಲ್ಲದೆ ಕೊಳ್ಳೆ ಹೊಡೆಯುತ್ತಿದ್ದಾರೆ. ಅವರೂ ನೈಸ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


14 ಸಾವಿರ ಎಕರೆ ಹೆಚ್ಚುವರಿ ಭೂಮಿ: 


ರೈತರಿಂದ ಈ ಯೋಜನೆಗೆ 14 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಪೂರ್ಣ ಬಹುಮತವೂ ಇದೆ. ರೈತರ ಬಗ್ಗೆ ಕಾಳಜಿ ಇದ್ದರೆ, ಅವರನ್ನು  ಉಳಿಸಬೇಕಲ್ಲವೇ? ಹಾಗಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಿ. ದಮ್ಮು, ‌ತಾಕತ್ತಿನ ಬಗ್ಗೆ ಹೇಳುತ್ತೀರಲ್ಲ, ನಿಮಗೆ ದಮ್ಮು ತಾಕತ್ತು ಇದ್ದರೆ ರೈತರ ಜಮೀನು ವಾಪಸ್ ಪಡೆಯಿರಿ ಎಂದು ಮಾಜಿ ಮುಖ್ಯಮಂತ್ರಿಗಳು ಸವಾಲು ಹಾಕಿದರು.


ಸಿಂಗಾಪುರಕ್ಕೆ ಬಂದಿದ್ದ ನೈಸ್‌ ಕುಳ:


ನಾನೊಮ್ಮೆ ಮುಖ್ಯಮಂತ್ರಿ ಆಗಿದ್ದಾಗ ಸಿಂಗಾಪುರಕ್ಕೆ ಅಧಿಕೃತ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿಗೆ ಈ ನೈಸ್‌ ಕಂಪನಿಯವನು ವ್ಯವಹಾರ ಕುದುರಿಸಲು ಬಂದಿದ್ದ ವಿಧಾನಸೌಧದ ಮೂರನೇ ಮಹಡಿಗೆ ಬಾ ಎಂದು ಉಗಿದು ಕಳಿಸಿದೆ. ಅವತ್ತು ನಾನು ಆ ಪಾಪದ ಕೆಲಸಕ್ಕೆ ಕೈ ಜೋಡಿಸಲಿಲ್ಲ. ಅಂದು ಈ ಬಗ್ಗೆ ನಾನೇನು ಅಂದುಕೊಂಡಿದ್ದೆನೋ ಈಗ ಅದೇ ನಡೆಯುತ್ತಿದೆ. ಟಿ.ಬಿ.ಜಯಚಂದ್ರ ಅವರು ಕೊಟ್ಟಿರುವ ಸದನ ಸಮಿತಿ ವರದಿ ಇದೆ. ಆ ವರದಿಯಲ್ಲಿ ನೈಸ್‌ ಅಕ್ರಮದ ವಿರಾಟ್‌ ರೂಪವೇ ತೆರೆದುಕೊಂಡಿದೆ. ಆಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೂ ಸದನ ಸಮಿತಿ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ-ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ


ನೈಸ್‌ ರಸ್ತೆ ಬೇಕೆಂದು ಬಯಸಿದ್ದು ದೇವೇಗೌಡರೇ. ಆ ಯೋಜನೆಯಲ್ಲಿ ರೈತರ ಭೂಮಿ ಹೊಡೆಯಲು ಹೊರಟಾಗ ಬೀದಿಗಿಳಿದು ಹೋರಾಟ ಮಾಡಿದ್ದು ಕೂಡ ದೇವೇಗೌಡರೇ. ಅವರು ರಸ್ತೆ ಆಗಲಿ ಎಂದು ಸಹಿ ಹಾಕಿದ್ದರು. ಆದರೆ, ಇಲ್ಲೊಬ್ಬರು ನನ್ನನ್ನು ಅಣ್ಣಾ ಅಂತ ಕರೆಯುವ ವ್ಯಕ್ತಿ ರೈತರ ಭೂಮಿ ಲಪಟಾಯಿಸಲು ಜನರಿಂದ ಪೆನ್ನು, ಪೇಪರ್‌ ಪಡೆದುಕೊಂಡಿದ್ದಾರೆ. ನಾನು ಪ್ರಾಣ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಅಂಥವರಿಗೆ ಎರಡು ಕೋಟಿ ದಂಡ ವಿಧಿಸಿದ ಕಾನೂನು ವ್ಯವಸ್ಥೆ ನಮ್ಮಲ್ಲಿದೆ. ಆದರೂ ಅವರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಹೇಳುವುದಿಷ್ಟೇ. 2018ರಲ್ಲಿ ನೀವೇ ಸಿಎಂ ಆಗಿದ್ದಿರಿ.ಆಗಲೇ ನೈಸ್‌ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಬಹುದಿತ್ತಲ್ಲವೇ ಎಂದು ಕೇಳಬಹುದು. ಆಗ ನನಗೆಲ್ಲಿ ಮಾಡಲು ಬಿಟ್ಟರು, ನಾನು ಅವರ ಹಂಗಿನಲ್ಲಿದ್ದೆ. ಅವತ್ತು ನಾನು ವಿಷಕಂಠನಾಗಿದ್ದೆ. ಕಾರ್ಯಕರ್ತರ ನೋವು ಗೊತ್ತಿತ್ತು ಎಂದು ಅವರು ಹೇಳಿದರು.


ವಿದ್ಯುತ್‌ ಖರೀದಿಯಲ್ಲಿ ಹಬ್ಬ:


ಕಾಂಗ್ರೆಸ್‌ ಸರಕಾರ ಎಲ್ಲಾ ಇಲಾಖೆಗಳಲ್ಲಿಯೂ ಲೂಟಿಗೆ ಟಾಋಗೆಟ್‌ ಫಿಕ್ಸ್‌ ಮಾಡಿಕೊಂಡಿದೆ. ಈಗ ಇಂಧನ ಇಲಾಖೆಯಲ್ಲು ಮೇಯಲು ಹೊರಟಿದೆ. ವಿದ್ಯುತ್ ಖರೀದಿಗೆ ಹೊರಟಿದ್ದಾರೆ, ವಿದ್ಯುತ್‌ ಖರೀದಿ ಎಂದರೆ ಇವರಿಗೆ ಹಬ್ಬ. ಖರೀದಿ‌ ಮಾಡಿದಷ್ಟು ಕಿಕ್ ಬ್ಯಾಕ್ ಜಾಸ್ತಿ. ಪ್ರತಿ ತಿಂಗಳು 1,500 ಕೋಟಿ ರೂ. ಖರ್ಚು ಮಾಡೋದಕ್ಕೆ ಹೊರಟಿದ್ದಾರೆ. ಇದರಲ್ಲಿ ಎಷ್ಟು ಹೊಡೆಯುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.


ರಾಜ್ಯದ ಉದ್ದಗಲಕ್ಕೂ ಈಗ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ರೈತರಿಗೆ ಸರಿಯಾಗಿ ಕರೆಂಟ್ ಕೊಡುತ್ತಿಲ್ಲ.ಈಗ ದೀಪಾವಳಿಗೆ ಮನೆಮನೆಗೂ ಮಣ್ಣಿನದೀಪ ಕೊಡಲು ಹೊರಟಿದ್ದಾರೆ. ಎಲ್ಲಿ ಕೊಟ್ಟಿದ್ದೀರಿ 200 ಯುನಿಟ್ ವಿದ್ಯುತ್ ಶಿವಕುಮಾರ್, ಸಿದ್ದರಾಮಯ್ಯನವರೇ? ಕಾಕಾ ಪಾಟೀಲ್ ಗೂ ಫ್ರೀ, ಮಹಾದೇವಪ್ಪಗೂ ಫ್ರೀ ಅಂದರು.‌ ಎಲ್ಲಿದೆ ಫ್ರೀ? ಸರಾಸರಿ ಅಂತ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದೆ ಈ ಸರಕಾರ. ಆದರೂ ನುಡಿದಂತೆ ನಡೆದಿದ್ದೇವೆ ಎಂದು ಪೊಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪ ಮಾಡಿದರು.2006ರಲ್ಲಿ ಬಿಜೆಪಿ ಜತೆ ಸರಕಾರ ರಚನೆ ಮಾಡಿದ್ದೆ. ಆಗ ದೇವೇಗೌಡರು ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಅವತ್ತು ಬಿಜೆಪಿ ಅವರು ಬಂದು ಸರಕಾರ ಮಾಡೋಣ ಎಂದರು. ಆ ಸಂದರ್ಭದಲ್ಲಿ ನಾನು ಎಂ.ಪಿ.ಪ್ರಕಾಶ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಆಗಿ ಎಂದು ಮನವಿ ಮಾಡಿಕೊಂಡೆ. ಅವರು ಒಪ್ಪಲಿಲ್ಲ. ಪಕ್ಷ ಉಳಿಸಲು ನಾನು ಬಿಜೆಪಿ ಜತೆ ಸರಕಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆ ದಿನಗಳನ್ನು ನೆನಪು ಮಾಡಿಕೊಂಡರು.


ಇದನ್ನೂ ಓದಿ-"ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ"


ಅವತ್ತು ಇದೇ ಡಿ.ಕೆ.ಶಿವಕುಮಾರ್ ಅವರು ನನ್ನ ಜತೆಯಲ್ಲಿ ಇದ್ದರು. ನನ್ನ ಕೈಯ್ಯನ್ನೂ ಮೇಲೆ ಎತ್ತಿದ್ದರು. ನಮ್ಮಿಬ್ಬರನ್ನು ಜೋಡೆತ್ತು ಅಂತ ಕರೆಯುತ್ತಿದ್ದರು. ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ನನ್ನ ಕೈಯ್ಯೆತ್ತಿ ಎತ್ತಿಗಾಡಿ, ಎತ್ತುಗಳನ್ನು ಹೈಜಾಕ್‌ ಮಾಡಿಕೊಂಡು ಹೋದರು. ನನ್ನ ನಡುರಸ್ತೆಯಲ್ಲಿ ಬಿಟ್ಟುಹೋದರು. ನಾನು ಅವರಿಗೆ ಮರುಳಾಗಿ ಹೋದೆ. ನಾನು ಅವರು ಬದಲಾಗಿರಬಹುದು ಎಂದು ನಂಬಿ ಮೋಸ ಹೋದೆ. ಈಗ ಸಿದ್ದರಾಮಯ್ಯ ಅವರ ಕೈ ಮೇಲೆತ್ತಿ ದಿನವೂ ಪೋಸು ಕೊಡುತ್ತಿದ್ದಾರೆ. ಅದೆಷ್ಟು ದಿನ ಅಂತ ನೋಡೋಣ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.


ಗ್ಯಾರಂಟಿಗಳ ನೆಪ ಹೇಳಿ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದ್ದಾರೆ. ಜನರಿಗೆ ಟೋಪಿ ಹಾಕುತ್ತಿದ್ದಾರೆ. ಕರ್ನಾಟಕ ಸಂಪದ್ಭರಿತ ರಾಜ್ಯ. ಹಣಕ್ಕೆ ಕೊರತೆ ಇಲ್ಲ. ನೈಸ್‌ ಒಂದು ಯೋಜನೆಯನ್ನು ಸರಕಾರದ ವಶಕ್ಕೆ ತೆಗೆದುಕೊಂಡರೆ ಇಂಥ ನೂರು ಗ್ಯಾರಂಟಿಗಳನ್ನು ಜಾರಿಗೆ ತರಬಹುದು. ಅಲ್ಲಿನ ಹೆಚ್ಚುವರಿ ಭೂಮಿಯನ್ನು ಕೂಡಲೇ ಸರಕಾರ ವಾಪಸ್‌ ಪಡೆಯಬೇಕು ಎಂದು ಅವರು ಒತ್ತಾಯ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ