ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಕರೆ
ಜೂನ್ 7 ಮಧ್ಯ ರಾತ್ರಿ 1.30 ಕ್ಕೆ ಲ್ಯಾಂಡ್ ಲೈನ್ ಗೆ ಕರೆ ಬಂದಿದೆ.
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಅಜಯ್ ಸಿಂಗ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪ್ರಿಯಾಂಖ ಖರ್ಗೆ ಅಂದೇ ನನ್ನ ಜೊತೆ ಚರ್ಚಿಸಿದ್ದರು. ಖರ್ಗೆಯವರು ಪಕ್ಷದಲ್ಲಿ ಹಿರಿಯ ನಾಯಕರು ಅಂತಹವರಿಗೆ ಜೀವ ಬೆದರಿಕೆ ಕರೆ ಬರುತ್ತಿರುವುದರ ಹಿಂದೆ ರಾಜಕೀಯವಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬರುತ್ತಿರುವ ವಿಚಾರ ಸಣ್ಣದಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಅಜಯ್ ಸಿಂಗ್ ಕೂಡಲೇ ಪೊಲೀಸ್ ಇಲಾಖೆ ಇದರ ಬಗ್ಗೆ ತನಿಖೆ ನಡೆಸಬೇಕು. ಜೊತೆಗೆ ಇದನ್ನು ಸಿಒಡಿ ತನಿಖೆಗೆ ವಹಿಸಬೇಕು. ಇವುಗಳ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆದರಿಕೆ ಕರೆ ಬಗ್ಗೆ ಖರ್ಗೆ ಪ್ರತಿಕ್ರಿಯೆ..
ಇನ್ನು ತಮಗೆ ಬೆದರಿಗೆ ಕರೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ನನಗೆ ಈ ಹಿಂದೆಯೂ ಅಂದರೆ ಸುಮಾರು ಎರಡು ವರ್ಷಗಳ ಹಿಂದೆ ಈ ರೀತಿಯ ಬೆದರಿಕೆ ಕರೆ ಬಂದಿತ್ತು. ಎರಡು ವರ್ಷಗಳ ಹಿಂದೆಯೇ ದೆಹಲಿಯಲ್ಲಿದ್ದಾಗ ಬೆದರಿಕೆ ಕರೆ ಮಾಡಿದ್ದರು. ಆಗಲೇ ಲೋಕಸಭೆ ಸ್ಪೀಕರ್, ಗೃಹ ಸಚಿವರ ಗಮನಕ್ಕೆ ತಂದಿದ್ದೆ. ತುಘಲಕ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಜೂನ್ 7 ಮಧ್ಯ ರಾತ್ರಿ 1.30 ಕ್ಕೆ ಲ್ಯಾಂಡ್ ಲೈನ್ ಗೆ ಕರೆ ಬಂದಿದೆ. ಅದೇ ರೀತಿಯಲ್ಲಿ ಬೈಗುಳದ ಭಾಷೆಯಲ್ಲಿ ಮಾತಾಡಿದ್ದಾರೆ. ನನ್ನ ಮಗ ಪ್ರಿಯಾಂಕ ಖರ್ಗೆಗೂ ಏಳೆಂಟು ಬಾರಿ ಕರೆಗಳು ಬಂದಿದೆ. ಈ ಬಗ್ಗೆ ಪ್ರಿಯಾಂಕ ಖರ್ಗೆ ಕೂಡ ದೂರು ನೀಡಿದ್ದಾರೆ ಎಂದು ತಿಳಿಸಿದರು.