ಮಡಿಕೇರಿ: ರಾಜ್ಯದಲ್ಲಿ ಹೋಂ ಸ್ಟೇ ನಿರ್ವಹಣೆ ಸಂಬಂಧ ನೂತನ ನೀತಿಯನ್ನು ಮುಂದಿನ ಜನವರಿ-ಫೆಬ್ರವರಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆಗಳು, ಪ್ರವಾಸೋದ್ಯಮ ನೀತಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರಚಾರಾಂದೋಲನ, ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಪ್ರವಾಸಿ ಕ್ಷೇತ್ರದಲ್ಲಿ ತೊಡಗಿರುವ ಪಾಲುಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಸ್ತುತ ರಾಜ್ಯದಲ್ಲಿನ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಿ ರಾಜ್ಯದ ಎಲ್ಲಾ ಪ್ರವಾಸಿ ಸಹಭಾಗಿದಾರರನ್ನು ಒಗ್ಗೂಡಿಸುವ ಸಂಬಂಧ ನಗರ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ಗುರುವಾರ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ಒಂದು ನೀತಿ ಬೇಕಿದೆ ಎಂದು ಹಲವು ದಶಕಗಳಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಹೋಂಸ್ಟೇಗಳಿಗೆ ಹೊಸ ನೀತಿಯನ್ನು ಸರ್ಕಾರ ಘೋಷಿಸಲಿದೆ ಎಂದು ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.


ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯದ್ದೇ ಗೆಲುವು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ


ಮಾಲಿಕರು ವಾಸಿಸುವ ಸ್ಥಳದಲ್ಲಿಯೇ ಹೋಂಸ್ಟೇಗಳು ಇರುವುದರಿಂದ ಅವುಗಳ ನಿರ್ವಹಣೆ, ನೋಂದಣಿ ಪ್ರಕ್ರಿಯೆ, ಎನ್‍ಒಸಿ ಪಡೆಯುವುದು ಮತ್ತಿತರ ಮಾರ್ಗಸೂಚಿಯನ್ನು ಹೊಸ ಹೋಸ್ಟೇ ನೀತಿಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ವಿವರಿಸಿದರು.


ಹೋಂಸ್ಟೇಗಳನ್ನು ನೋಂದಣಿ ಮಾಡಿಕೊಂಡು ಪ್ರವಾಸಿಗರಿಗೆ ಉತ್ತಮ ಮೂಲ ಸೌಲಭ್ಯ ಕಲ್ಪಿಸಬೇಕು. ಅಂತಹ ಹೋಂಸ್ಟೇಗಳಿಗೆ ಆದಷ್ಟು ಸಹಕಾರ, ಪ್ರೋತ್ಸಾಹ ನೀಡಲಾಗುವುದು. ಆ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜೇಂದ್ರ ಅವರು ತಿಳಿಸಿದರು.


ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಲ್ಲಿ ‘ವೃತ್ತಿ ಕೌಶಲ್ಯ ತರಬೇತಿ’ ಕಾರ್ಯಕ್ರಮವನ್ನು ಹಮ್ಮಿಕೊಂಡು, ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಒತ್ತು ನೀಡಲು ಮುಂದಾಗಲಾಗಿದೆ ಎಂದು ಡಾ.ಕೆ.ವಿ.ರಾಜೇಂದ್ರ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.


ಸ್ಥಳೀಯವಾಗಿ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಪ್ರವಾಸೋದ್ಯಮ ಸಾಕಷ್ಟು ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪ್ರತೀ ಜಿಲ್ಲೆಯಲ್ಲೂ ಆಯೋಜಿಸಲಾಗುವುದು ಎಂದು ಹೇಳಿದರು.


ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸರ್ಕಾರಕ್ಕೂ ಆದಾಯ ಬರಲಿದ್ದು, ತೆರಿಗೆ ಸಂಗ್ರಹವಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ. ಆ ನಿಟ್ಟಿನಲ್ಲಿ ಯುವಜನರಿಗೆ ಅವಕಾಶಗಳು ಒದಗಲಿವೆ ಎಂದರು.


ಪ್ರವಾಸೋದ್ಯಮ ಅಭಿವೃದ್ಧಿ ಮಾಡುವಲ್ಲಿ ಹೋಂಸ್ಟೇ, ಹೋಟೆಲ್‍ಗಳು, ಟ್ರಾವೆಲ್ ಹೀಗೆ ಒಂದಕ್ಕೊಂದು ಸಂಬಂಧವಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಆಗಬೇಕಿರುವ ಕೆಲಸಗಳ ಬಗ್ಗೆ ಬೆಳಕು ಚೆಲ್ಲುವಂತಾಗಬೇಕು. ತಮ್ಮ ನಿರೀಕ್ಷೆಗಳು ಏನು, ಭವಿಷ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.


‘ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯವು ಹತ್ತನೇ ಸ್ಥಾನದೊಳಗಿದೆ. ಕೇರಳ, ಗೋವಾ, ತಮಿಳುನಾಡು, ಕರ್ನಾಟಕ ರಾಜ್ಯಗಳು ತಮ್ಮದೇ ಆದ ಸ್ಥಾನ ಪಡೆದಿವೆ. ರಾಜ್ಯದಲ್ಲಿ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೈಸೂರು, ವಿಜಯನಗರದ ಹಂಪಿ, ಕೊಡಗು, ಚಿಕ್ಕಮಗಳೂರು, ವಿಜಯಪುರ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಚಾಮರಾಜನಗರ, ಹೀಗೆ ವಿವಿಧ ಪ್ರವಾಸಿ ಸ್ಥಳಗಳು ಪ್ರವಾಸಿಗರನ್ನು ಆಕರ್ಷಣೀಯಗೊಳಿವೆ ಎಂದು ರಾಜೇಂದ್ರ ಅವರು ವಿವರಿಸಿದರು.’


ಸ್ವಾಭಾವಿಕ ಸಂಪನ್ಮೂಲವನ್ನು ಉಳಿಸಿಕೊಂಡು, ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಸೆಳೆಯುವಂತಾಗಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಸೂಕ್ತ ವೇದಿಕೆ ಕಲ್ಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.


ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ‘ಕಾಫಿ ಟೇಬಲ್ ಬುಕ್’ನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.


ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಸರುವಾಸಿಯಾಗಿದೆ. ಇಲ್ಲಿನ ರಾಜಾಸೀಟು, ಮಾಂದಲ್ ಪಟ್ಟಿ ಪ್ರವಾಸಿ ಸ್ಥಳಗಳು ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಜಲಪಾತಗಳು, ಕಾಫಿ, ಆನೆ ಶಿಬಿರ, ನಗರದ ಕೋಟೆ ಸಹ ಪ್ರಸಿದ್ಧ ತಾಣವಾಗಿದೆ ಎಂದರು.


ಪ್ರವಾಸಿ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥೆ ಹೀಗೆ ಮತ್ತಿತರ ‘ಡೆಸ್ಟಿನೇಷನ್ ಟೂರಿಸಂಗೆ’ ಒತ್ತು ನೀಡುವುದು ಅತ್ಯಗತ್ಯವಾಗಿದೆ ಎಂದರು.


ಜಿಲ್ಲೆ ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ ವೆಬ್‍ಸೈಟ್ ಮೂಲಕ ಮಾಹಿತಿ ದೊರೆಯುವಂತಾಗಬೇಕು. ಪ್ರವಾಸಿಗರಿಗೆ ಉತ್ತಮ ವಾತಾವರಣ ನಿರ್ಮಿಸಬೇಕು. ಹೋಂಸ್ಟೇ. ರೆಸಾರ್ಟ್‍ಗಳು ನೋಂದಣಿ ಮಾಡಿಕೊಳ್ಳಬೇಕು. ಪ್ರವಾಸಿಗರಿಗೆ ಕಿರಿಕಿರಿ ಉಂಟಾಗದಂತೆ ಗಮನಹರಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಒತ್ತಿ ಹೇಳಿದರು.


ಕೊಡಗು ಜಿಲ್ಲೆಯಲ್ಲಿ ಮುಂದಿನ ಎರಡು ವರ್ಷದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಲ್ಲಿ ಈಗಿನಿಂದಲೇ ಯೋಜನೆ ರೂಪಿಸಬೇಕಿದೆ. ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ ಎಂದು ಹೇಳಿದರು.


ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಯೊಬ್ಬರು ಮಾತನಾಡಿ ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಲ್ಲಿ ಹಲವು ಉತ್ತೇಜನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಸರು ನೋಂದಾಯಿಸಲು ಮುಂದಾಗಬೇಕಿದೆ ಎಂದರು.


ಸಂವಾದ ಸಂದರ್ಭದಲ್ಲಿ ಮಾತನಾಡಿದ ಮೋಂತಿ ಗಣೇಶ್ ಅವರು ಕೊಡಗು ಜಿಲ್ಲೆಯಲ್ಲಿ 2003ರಲ್ಲಿ ಹೋಂಸ್ಟೇಗಳ ಪರಿಕಲ್ಪನೆ ಆರಂಭವಾಯಿತು. ಜಿಲ್ಲೆಯಲ್ಲಿ 2200 ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿದ್ದು, ಹೋಂಸ್ಟೇಗಳಿಗೆ ಒಂದು ನೀತಿ ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದರು.


ಅನಧಿಕೃತ ಹೋಂಸ್ಟೇಗಳು ಹೆಸರು ನೋಂದಣಿಗೆ ಮುಂದಾಗಲು ಹೆಚ್ಚಿನ ಉತ್ತೇಜನ ನೀಡಬೇಕು. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನೆಹರು ಮಂಟಪ, ಗದ್ದಿಗೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕಿದೆ. ಜೊತೆಗೆ ವ್ಯೂ ಪಾಯಿಂಟ್‍ಗಳನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕು. ರಸ್ತೆ ಬದಿ ಕಸ ಬಿಸಾಡುವುದನ್ನು ತಡೆಯಬೇಕಿದೆ. ಮಾಂದಲ್ ಪಟ್ಟಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಬೇಕಿದೆ. ಮಲ್ಲಳ್ಳಿ ಮತ್ತು ಇರ್ಪು ಜಲಪಾತವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದರು.


ಮಡಿಕೇರಿ ನಗರದಲ್ಲಿನ ಕೋಟೆಯು ಐತಿಹಾಸಿಕ ಸ್ಥಳವಾಗಿದ್ದು, ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಮೊಂತಿ ಗಣೇಶ್ ಅವರು ಸಲಹೆ ಮಾಡಿದರು.


ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಕೊಡಗು ಜಿಲ್ಲೆಗೆ ಪ್ರತೀ ವಾರಾಂತ್ಯದಲ್ಲಿ ಒಂದು ಲಕ್ಷ ಜನರು ಭೇಟಿ ನೀಡುತ್ತಾರೆ. ಆದ್ದರಿಂದ ವಿವಿಧೋದ್ದೇಶ ಯೋಜನೆಯಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.


ಪ್ರವಾಸೋದ್ಯಮ ಸಂಘದ ಗೌರವ ಸಲಹೆಗಾರರಾದ ಅನಿಲ್ ಎಚ್.ಟಿ. ಅವರು ಮಾತನಾಡಿ ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಮಾಹಿತಿ ದೊರೆಯುವಲ್ಲಿ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಂತರ್‍ಜಾಲ ಮೂಲಕ ವಿವಿಧ ಭಾಷೆಯಲ್ಲಿ ಮಾಹಿತಿ ದೊರೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.


ಇದನ್ನೂ ಓದಿ: ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿ ಡಿ.ಕೆ.ಸುರೇಶ್


ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಕೆ.ಶ್ಯಾಮರಾಜ್, ಕರ್ನಾಟಕ ಹೋಟೆಲ್ ಅಸೋಷಿಯೇಷನ್‍ನ ಅಧ್ಯಕ್ಷರಾದ ಜಿ.ಕೆ.ಶೆಟ್ಟಿ, ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಸದಸ್ಯರಾದ ಅಯ್ಯಪ್ಪ ಸೋಮಯ್ಯ, ಬೆಂಗಳೂರು ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷರಾದ ಪಿ.ಸಿ.ರಾವ್, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಸಂಸ್ಥೆಯ ಸಲಹೆಗಾರರಾದ ಜಿ.ಚಿದ್ವಿಲಾಸ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಸಂಸ್ಥೆಯ ಕಾರ್ಯದರ್ಶಿ ನಾಜೀರ್, ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಸಂಸ್ಥೆಯ ಅಧ್ಯಕ್ಷರಾದ ವಸಂತ, ಛಾಯಾ ನಂಜಪ್ಪ, ಕರ್ನಾಟಕ ಪ್ಲಾಂಟರ್ ಅಸೋಷಿಯೇಷನ್‍ನ ಸದಸ್ಯರಾದ ಮೋಹನ್ ದಾಸ್, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಸಮಾಲೋಚಕರಾದ ಜತಿನ್ ಬೋಪಣ್ಣ ಇತರರು ಇದ್ದರು.


ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಸ್ವಾಗತಿಸಿದರು, ಜಿಲ್ಲಾ ಹೋಟೆಲ್ ಅಸೋಷಿಯೇಷನ್‍ನ ಸಲಹೆಗಾರರಾದ ಜಿ.ಚಿದ್ವಿಲಾಸ್ ಅವರು ನಿರೂಪಿಸಿದರು, ಕುಮಾರಿ ಸ್ವಪ್ನಾ ಹಾಗೂ ಚೋಂದಮ್ಮ ನಾಡಗೀತೆ ಹಾಡಿದರು, ಹೋಟೆಲ್ ಅಸೋಷಿಯೇಷನ್‍ನ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ ವಂದಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ