ಬೆಳಗಾವಿ: ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ದೃಷ್ಟಿಯಿಂದ ಯರಗಟ್ಟಿ-ಬೆಳಗಾವಿ ರಾಜ್ಯ ಹೆದ್ದಾರಿ-20 ರಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ಅನುಷ್ಠಾನಗೊಳಿಸಿರುವ ಪೈಲಟ್ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುರಕ್ಷಿತ ಮಾರ್ಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ರಸ್ತೆ ಸುರಕ್ಷತಾ ಜಾಗೃತಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಅಪಘಾತ ಪ್ರಮಾಣ ತಗ್ಗಿಸುವ ಮೂಲಕ ಜನರ ಪ್ರಾಣರಕ್ಷಣೆಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ಯರಗಟ್ಟಿ-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆಗಾಗಿ ಅಂತರ್ ರಾಷ್ಟ್ರೀಯ ದರ್ಜೆಯ ವಿನೂತನ ಪ್ರಯೋಗವನ್ನು ರಾಜ್ಯದಲ್ಲಿಯೇ ಮೊದಲ ಬಾರಿ ಅನುಷ್ಠಾನಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಇತರೆ ಹೆದ್ದಾರಿಗಳಲ್ಲೂ ದಿನಗಳಲ್ಲಿ ಇದೇ ಮಾದರಿಯ ಸುರಕ್ಷತಾ ಕ್ರಮ ಅಳವಡಿಸಲಾಗುವುದು ಎಂದರು.


ರಸ್ತೆ ಅಪಘಾತ ಸಂದರ್ಭದಲ್ಲಿ ತಕ್ಷಣವೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಿರುಚಿತ್ರವನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು. ಮದ್ಯಪಾನದ ಮಾಡಿ ವಾಹನ ಚಾಲನೆ ಮಾಡುವುದರಿಂದ ಆಗುವ ಅನಾಹುತಗಳ ಕುರಿತು ಜಾಗೃತಿ ಮೂಡಿಸುವ ಜನಪದ ಗೀತೆ ಆಲಿಸಿದರು.


ನಂತರ ರಸ್ತೆ ಸುರಕ್ಷತೆ ಕುರಿತ ಕ್ಯಾಲೆಂಡರ್, ರೇಡಿಯೋ ಜಿಂಗಲ್, ಮಡಿಕೆಪತ್ರ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.