`ಜನಧ್ವನಿ ಸಮಾವೇಶ`, ಇಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ.
ಬೀದರ್: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೀದರ್ ನ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿರುವ 'ಜನಧ್ವನಿ ಸಮಾವೇಶ'ದಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಬೀದರ್ ಏರ್‌ಬೇಸ್‌ಗೆ ಬೆಳಿಗ್ಗೆ 11:00 ಗಂಟೆಗೆ ಆಗಮಿಸಲಿರುವ ರಾಹುಲ್ ಗಾಂಧಿ, ಅಲ್ಲಿಂದ ನೇರವಾಗಿ ನಗರದ ನೆಹರು ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಭದ್ರತೆಗೆ ಎಸ್‌ಪಿಜಿ ಸೇರಿ 1200 ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜನಧ್ವನಿ ಕಾರ್ಯಕ್ರಮ ಎರಡು ಗಂಟೆಗಳ ಕಾಲ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಡಿ.ಕೆ. ಶಿವಕುಮಾರ ಸೇರಿ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ.
ಈ ಸಮಾರಂಭದಲ್ಲಿ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿನಂದಿಸಲಿದ್ದಾರೆ. ಕಾರ್ಯಕ್ರಮದಲ್ಲಿ 2 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ರಾಜ್ಯದ 28 ಸಂಸತ್ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಪಡೆಯಲು ಕೈ ಪಡೆ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ 8 ತಿಂಗಳು ಮುಂಚಿತವೇ ಚುನಾವಣಾ ಸಮರಕ್ಕೆ ಧುಮುಕಿರುವ ಕಾಂಗ್ರೆಸ್, ಜನಧ್ವನಿ ಸಮಾವೇಶ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿದೆ.