ನಾನು ಹೇಡಿಯಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧ: ಡಿ.ಕೆ.ಶಿವಕುಮಾರ್
ನನಗೆ ದೇಶದ ಕಾನೂನು ತಿಳಿದಿದೆ. ಅಷ್ಟಕ್ಕೂ ನಾನು ಹೇಡಿಯಲ್ಲ, ನಾನು ಯಾವ ತಪ್ಪನ್ನೂ ಮಾಡಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ನನ್ನ ಮೇಲಿನ ಎಲ್ಲಾ ಆರೋಪಗಳೂ ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ವಕ್ತಾರ ಸಂದೀಪ್ ಪಾತ್ರಾ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಮೇಲೆ ಹಲವು ಆರೋಪಗಳನ್ನು ಮಾಡಿದ ಬೆನ್ನಲ್ಲೇ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, ಹಲವರು ಜಾರಿ ನಿರ್ದೇಶನಾಲಯ ನನ್ನನ್ನು ಬಂಧಿಸಲಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ದೇಶದ ಕಾನೂನು ತಿಳಿದಿದೆ. ಅಷ್ಟಕ್ಕೂ ನಾನು ಹೇಡಿಯಲ್ಲ, ನಾನು ಯಾವ ತಪ್ಪನ್ನೂ ಮಾಡಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧ ಎಂದು ಹೇಳಿದರು.
ಸೆಪ್ಟೆಂಬರ್ 18ರಂದು ಜಾರಿ ನಿರ್ದೇಶನಾಲಯವು ಸಚಿವ ಡಿ.ಕೆ.ಶಿವಕುಮಾರ್ ಅವರ ದೆಹಲಿ ಫ್ಲ್ಯಾಟ್'ಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಹವಾಲ ಹಣ ಸಾಗಣೆ, ತೆರಿಗೆ ವಂಚನೆ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿತ್ತು. ಈ ಪ್ರಕರಣದಲ್ಲಿ ಡಿಕೆಶಿಯವರನ್ನು ಬಂಧಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿತ್ತು. ಈ ಎಲ್ಲಾ ಕಾನೂನು ಬೆಳವಣಿಗೆಗಳ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರಾದ್ದರಿಂದ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.