2019ರ ಡಿಸೆಂಬರ್ ಒಳಗೆ ರೈತರ ಸಂಪೂರ್ಣ ಸಾಲ ಮನ್ನಾ: ಸಿಎಂ ಹೆಚ್.ಡಿ.ಕುಮಾರಸ್ವಾಮಿ
2019ರ ಡಿಸೆಂಬರ್ ಒಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಹಾಸನ: 2019ರ ಡಿಸೆಂಬರ್ ಒಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರೈತರಿಗೆ 'ಕೃಷಿ ಸಾಲ ಋಣಮುಕ್ತ ಪ್ರಮಾಣ ಪತ್ರ' ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವ ಬಗ್ಗೆ ಪ್ರಕಟಿಸಿದ್ದಾಗ ವಿಧಾನಸಭೆಯ ಹಿಂದಿನ ಸೀಟಿನಲ್ಲಿ ಕುಳಿತವರು ಕೊಂಕು ಮಾತನಾಡಿ ಅಣಕಿಸಿದ್ದರು. ಇದೀಗ 2019ರ ಡಿಸೆಂಬರ್ ಒಳಗೆ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ತಕ್ಕ ಉತ್ತರ ನೀಡಲಾಗುವುದು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಇದೇ ಸಂದರ್ಭದಲ್ಲಿ ಸಾಲ ನೀಡಿಕೆ ಬಗ್ಗೆ ಮಾತನಾಡಿದ ಸಿಎಂ, ರೈತರು ಬೆಳೆಯುವ ಸಿರಿಧಾನ್ಯಕ್ಕೆ ಉತ್ತೇಜನ ನೀಡಲು ಎಕರೆಗೆ ಹತ್ತು ಸಾವಿರ ರೂ. ಸಬ್ಸಿಡಿ ನೀಡಲಾಗುವುದು. ಹಾಗೆಯೇ ಮಾರುಕಟ್ಟೆಯಲ್ಲಿ ಗೋದಾಮು ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಹೇಳಿದರಲ್ಲದೆ, ರೈತ ಮಹಿಳೆಯರಿಗೆ ಶೇ.3ರ ಬಡ್ಡಿದರದಲ್ಲಿ ಚಿನ್ನದ ಮೇಲೆ ಸಾಲ ನೀಡಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲಿ 10,000 ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ
ಪ್ರತಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ. ಇದರನ್ವಯ ಪ್ರತಿ ಜಿಲ್ಲೆಯಲ್ಲಿ 10,000 ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ ಎಂದು ಸಿಎಂ ಹೇಳಿದರು.