ಡ್ರಗ್ಸ್ ಧಂಧೆಯಿಂದ ಸಮ್ಮಿಶ್ರ ಸರ್ಕಾರ ಕೆಡವಿದ ವಿಚಾರ: ಮಾಜಿ ಸಿಎಂ ಎಚ್ಡಿಕೆಗೆ ಸಚಿವ ಸುಧಾಕರ್ ಸವಾಲು
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, `ಸಾಕ್ಷಿ ಸಮೇತ ನಿಮ್ಮ ಆರೋಪವನ್ನು ಸಾಬೀತು ಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಅಥವಾ ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೀರಾ? - ಸಚಿವ ಡಾ. ಕೆ. ಸುಧಾಕರ್
ಬೆಂಗಳೂರು: ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಜೊತೆ ಮೆಡಿಕಲ್ ಕಾಲೇಜು ವಿವಾದಕ್ಕೆ ಸಂಬಂಧಿಸಿದಂತೆ ಜಗಳ, ನಂತರ COVID- 19 ನೆಪ ಇಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಜಟಾಪಟಿಗೆ ಇಳಿದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಈಗ ಬೆಂಗಳೂರಿನಲ್ಲಿ ಕಂಡುಬಂದಿರುವ ಬೃಹತ್ ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ( HD Kumaraswamy) ಅವರೊಂದಿಗೆ ವಾಗ್ಯುದ್ದಕ್ಕೆ ಇಳಿದಿದ್ದಾರೆ.
ಬೆಂಗಳೂರಿನಲ್ಲಿ ಕಂಡುಬಂದಿರುವ ಬೃಹತ್ ಡ್ರಗ್ಸ್ (Drugs) ಧಂಧೆ ಹಿನ್ನಲೆಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೇ ಡ್ರಗ್ಸ್ ಧಂಧೆಯಿಂದ ಬಂದ ಹಣದಿಂದಲೇ ಬಿಜೆಪಿ ನಾಯಕರು ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಡ್ರಗ್ಸ್ ಧಂಧೆಯ ಹಣವೇ ಮೂಲ ಎನ್ನುವ ಅರ್ಥದಲ್ಲಿ ಮಾತನ್ನಾಡಿದ್ದರು.
ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, 'ಸಾಕ್ಷಿ ಸಮೇತ ನಿಮ್ಮ ಆರೋಪವನ್ನು ಸಾಬೀತು ಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಅಥವಾ ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೀರಾ? ಎಂದು ಸವಾಲೆಸೆದಿದ್ದಾರೆ.
'ತಮ್ಮ ಆರೋಪಗಳ ಹಿನ್ನಲೆ ಆಧಾರಗಳ ಬಗ್ಗೆ ಕೇಳಿದ್ದೇನೆ. ನಾನು ಮಾಜಿ ಮುಖ್ಯಮಂತ್ರಿ ಮಾಜಿ ಪ್ರಧಾನಮಂತ್ರಿಯ ಮಗನಲ್ಲ, ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮರ್ಥ್ಯದಿಂದ, ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ. ಎಲ್ಲರ ಹಿನ್ನಲೆಗಳನ್ನೂ ರಾಜ್ಯದ ಜನರು ಗ್ರಹಿಸಿದ್ದಾರೆ' ಎಂದು ಸುಧಾಕರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇದಲ್ಲದೆ 'ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 1೫ ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಪಕ್ಕದಲ್ಲಿ ಧರಮ್ ಸಿಂಗ್ ಅವರನ್ನು ಇಟ್ಟುಕೊಂಡು, ಕೆಲವು ಸ್ನೇಹಿತರೊಂದಿಗೆ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಹಿನ್ನಲೆ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಒಮ್ಮೆ ಕೇಳಿಸಿಕೊಳ್ಳಿ!' ಎಂದು ಟಾಂಗ್ ಕೊಟ್ಟಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಕುಮಾರಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆ. ಎಂದು ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಮತ್ತು ಸುಧಾಕರ್ ನಡುವಿನ ಈ ಟ್ವೀಟ್ ವಾರ್ ಇನ್ನೂ ಯಾವ್ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.