ಬೆಂಗಳೂರು: ತಾವೆಂದಿಗೂ ಕೂಡ ಐಟಿ ದಾಳಿಗೆ  ಹೆದರಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇತ್ತೀಚಿಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರುಗಳ ಮೇಲೆ ಐಟಿ ದಾಳಿ ನಡೆಸುತ್ತಿರುವುದರ ಬಗ್ಗೆ ಕಿಡಿ ಕಾರುತ್ತಾ ಸಿಎಂ ಈ ರೀತಿ ತೀರುಗೇಟು ನೀಡಿದ್ದಾರೆ.



COMMERCIAL BREAK
SCROLL TO CONTINUE READING

ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಧಾನಸೌದದ ಹತ್ತಿರವಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಎಂ ಕುಮಾರ್ ಸ್ವಾಮಿ " ನಾನು ಐ-ಟಿ ದಾಳಿಗಳ ಬಗ್ಗೆ ಹೆದರುವುದಿಲ್ಲ. ದೇವಗೌಡಅವರು ಊಟಕ್ಕಾಗಿ ಯಾರದೋ ಮನೆಗೆ ಹೋಗಿದ್ದರು ಅವರ ಮನೆ ಮೇಲೆಯೂ ಕೂಡ ಐಟಿ ದಾಳಿಯನ್ನು ಮಾಡಲಾಗಿದೆ. ಇದು ಎಂತಹ  ಸರ್ಕಾರ?  ನಾನು ಪ್ರಧಾನಿ ಮೋದಿಯವರಿಂದ  ಕಲಿಯಬೇಕಾಗದ ಅಗತ್ಯವಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ನಾನು ಅವರಂತೆ ಮುಗ್ದ ಜನರ ಜೀವ ತೆಗೆದುಕೊಂಡಿಲ್ಲ " ಎಂದು ಹೇಳಿದರು.



ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಹಾನ್ ವ್ಯಕ್ತಿ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಅತ್ಯಂತ ಉನ್ನತ ಧ್ಯೇಯೋದ್ಧೇಶ ಹೊಂದಿದ ಸಂವಿಧಾನ ರಚಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟವರು ಡಾ ಬಿ ಆರ್ ಅಂಬೇಡ್ಕರ್ ಅವರು. ಅವರ ಆಶಯಗಳನ್ನು ಸಾಕಾರಗೊಳಿಸಲು ಯತ್ನಿಸುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ."ಎಂದು ಹೇಳಿದ್ದಾರೆ.


ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ: ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಜೊತೆಗಿದ್ದರು.