ಬೆಂಗಳೂರಿನಲ್ಲಿ ಲಾಕ್ಡೌನ್ ಬ್ರೇಕ್ ಬಳಿಕ ಎಣ್ಣೆ ಏಟಿಗೆ ಮತ್ತೊಂದು ಕೊಲೆ
ಲಾಕ್ಡೌನ್ ನಿಯಮ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಮೊದಲ ದಿನವಾದ ಸೋಮವಾರ ಬಾಗಲಗುಂಟೆ ಬಳಿಯ ಸಿಡೇದಹಳ್ಳಿಯಲ್ಲಿ ಮತ್ತಿನಲ್ಲಿದ್ದ ರೌಡಿಶೀಟರ್ ತನ್ನ ಸ್ನೇಹಿತ ರೌಡಿಶೀಟರ್ ಒಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ.
ಬೆಂಗಳೂರು: ಲಾಕ್‌ಡೌನ್ ಜಾರಿಯಲ್ಲಿ ಇದ್ದುದರಿಂದ ಕಳೆದ 40 ದಿನಗಳಿಂದ ಮಧ್ಯ ಮಾರಾಟಕ್ಕೆ ಇದ್ದ ನಿರ್ಭಂದವನ್ನು ತೆರವುಗೊಳಿಸುತ್ತಿದ್ದಂತೆ ಮದ್ಯಪ್ರಿಯರು ಸಿಕ್ಕಾಪಟ್ಟೆ ಕುಡಿದು ಅವಾಂತರ ಗೊಳಿಸುತ್ತಿದ್ದಾರೆ. ಈ ನಡುವೆ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ಕಾಮಾಕ್ಷಿ ಪಾಳ್ಯದಲ್ಲಿ ನಡೆದಿದೆ.
ಲಾಕ್‍ಡೌನ್ (Lockdown) ನಂತರ ಕುಡುಕರ ಅವಾಂತರದಿಂದ ನಡೆದ ಎರಡನೇ ಕೊಲೆ ಇದಾಗಿದೆ. ಲಾಕ್‌ಡೌನ್ ನಿಯಮ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಮೊದಲ ದಿನವಾದ ಸೋಮವಾರ ಬಾಗಲಗುಂಟೆ ಬಳಿಯ ಸಿಡೇದಹಳ್ಳಿಯಲ್ಲಿ ಮತ್ತಿನಲ್ಲಿದ್ದ ರೌಡಿಶೀಟರ್ ತನ್ನ ಸ್ನೇಹಿತ ರೌಡಿಶೀಟರ್ ಒಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ.
ಬಾಗಲಗುಂಟೆ ಬಳಿಯ ಸಿಡೇದಹಳ್ಳಿಯ ರೌಡೀಶೀಟರ್ ಗಳ ಎಣ್ಣೆ ಕಾದಾಟ ಮತ್ತು ಕೊಲೆ ಪ್ರಕರಣ ಮರೆಯುವ ಮುನ್ನವೇ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಅಂಥದೇ ಘಟನೆ ನಡೆದಿದೆ. ಪುರುಷೋತ್ತಮ್ ಎಂಬುವರೇ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ.
ಕಾಮಾಕ್ಷಿಪಾಳ್ಯದ ಆದಿತ್ಯ ಬಾರ್ ಮುಂಭಾಗದಲ್ಲಿ ಕೊಲೆಯಾಗಿದೆ. ಪುರುಷೋತ್ತಮ್ ನನ್ನು ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಮತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಸಿಡೆದಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಡರಾತ್ರಿ ಆರೋಪಿ ಬಂಧಿಸುವ ವೇಳೆ ಕಾಲಿಗೆ ಗುಂಡು ಬಿದ್ದಿದೆ. ರೌಡಿಶೀಟರ್ ಪ್ರಭು ಬಾಗಲಗುಂಟೆ ಠಾಣೆಯ ಹೆಡ್ ಕಾನ್ಸ್ಟಬಲ್ ಹನುಮೇಗೌಡ ಕೈಗೆ ಚಾಕು ಹಾಕಿ ಪರಾರಿ ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪಿಎಸ್‌ಐ ಶ್ರೀಕಂಠೆಗೌಡ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿ ಪ್ರಭು ಹಾಗೂ ಗಾಯಾಳು ಮುಖ್ಯ ಪೇದೆಯನ್ನ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಲೆ ನಡೆದ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಭು ಪ್ರಯತ್ನಿಸಿದ್ದ.
ಕೊರೋನ ಮಹಾಮಾರಿಯನ್ನು ನಿಯಂತ್ರಿಸಲೆಂದು ಅನಿವಾರ್ಯವಾಗಿ ತಂದ ಲಾಕ್ಡೌನ್ ವೇಳೆ ಮದ್ಯ ಮಾರಾಟವನ್ನು ನಿಷೇಧಗೊಳಿಸಲಾಗಿತ್ತು. ಇದರಿಂದಾಗಿ ಮದ್ಯ ವ್ಯಸನಿಗಳು ಕಳೆದ 40 ದಿನದಿಂದ ಮದ್ಯ ಸಿಗದೆ ಕಂಗಾಲಾಗಿದ್ದರು. ಸೋಮವಾರ ರಾಜ್ಯ ಸರ್ಕಾರ ಮದ್ಯದ ಮೇಲಿನ ನಿಷೇಧ ಸಡಿಲಿಸಿಗೊಳಿಸುತ್ತಿದ್ದಂತೆ ಲ ಕುಡಿದು ಅವಾಂತರ ಸೃಷ್ಟಿಸುತ್ತಿದ್ದಾರೆ.
ಈ ನಡುವೆ ಡ್ರಿಂಕ್ ಆಂಡ್ ಡ್ರೈವ್ ಕೇಸ್ ಗಳ ತಪಾಸಣೆಗೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಹಾಲ್ಕೋ ಮೀಟರ್ ಮೂಲಕ ಡಿಡಿ ಚೆಕ್ ಮಾಡದಿರಲು ನಿರ್ಧರಿಸಿದ್ದಾರೆ. ಕೊರೋನಾ ಭೀತಿಯಿಂದ ಹಾಲ್ಕೋ ಮೀಟರ್ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ರೀತಿ ಚೆಕ್ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅಪಾಯಕಾರಿ ಎಂಬುದು ಪೊಲೀಸರ ಲೆಕ್ಕಾಚಾರ. ಆದುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕುಡಿದು ಸಿಕ್ಕಿಬಿದ್ರೆ ವೈದ್ಯಕೀಯ ಪರೀಕ್ಷೆ ನಡೆಸಿ ಕೇಸ್ ದಾಖಲಿಸಲು ಚಿಂತನೆ ನಡೆಸಲಾಗಿದೆ.