ನವದೆಹಲಿ: ವಿವಾದಾತ್ಮಕ ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಮಹಾದಾಯಿ ನ್ಯಾಯಾಧೀಕರಣದಲ್ಲಿ ಕಳೆದ 11 ದಿನಗಳಿಂದ ನಡೆಸಿದ್ದ ಅಂತಿಮ ಹಂತದ ವಿಚಾರಣೆ ಮುಕ್ತಾಯಗೊಂಡಿದೆ. ಮಹಾದಾಯಿ ನ್ಯಾಯಾಧೀಕರಣದ ಅವಧಿ ಇದೇ ವರ್ಷ ಆಗಸ್ಟ್ ನಲ್ಲಿ ಮುಗಿಯುವುದರಿಂದ ಅಷ್ಟರೊಳಗೆ ತೀರ್ಪು ಹೊರಬೀಳಲಿದೆ. ಫೆ.16ರಂದು ಸುಪ್ರೀಂಕೋರ್ಟ್ ನಿಂದ ಹೊರಬಿದ್ದ ಮಹತ್ವದ ಕಾವೇರಿ ತೀರ್ಪಿನಲ್ಲಿ ರಾಜ್ಯಕ್ಕೆ ದೊರೆತ ನ್ಯಾಯ, ಮಹಾದಾಯಿ ನದಿ ವಿಚಾರದಲ್ಲೂ ದೊರೆಯುವುದೇ ಎಂಬುದನ್ನು ಕಾದುನೋಡಬೇಕಿದೆ.


COMMERCIAL BREAK
SCROLL TO CONTINUE READING

ನ್ಯಾ. ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿ ಸದಸ್ಯ ಪೀಠದ ಮಹಾದಾಯಿ ನ್ಯಾಯಾಧೀಕರಣದಲ್ಲಿ  ಇದೇ ಫೆಬ್ರವರಿ 8ರಿಂದ ನಡೆದಿದ್ದ ಅಂತಿಮ‌ ಹಂತದ ವಿಚಾರಣೆ ಒಟ್ಟು ಹನ್ನೊಂದು ದಿನಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಲಿಖಿತ ರೂಪದಲ್ಲಿ ತಮ್ಮ ವಾದಗಳನ್ನು ಮಂಡಿಸಿವೆ. 


ಕರ್ನಾಟಕ ಪರ ವಾದ ಮಂಡಿಸಿದ ವಕೀಲರು ಮಹಾದಾಯಿ ನದಿ ಪಾತ್ರದಲ್ಲಿರುವ ನೀರಿನಲ್ಲಿ ಕರ್ನಾಟಕಕ್ಕೆ 14.98 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ 7 ಟಿಎಂಸಿ ನೀರನ್ನು ಕುಡಿಯುವುದಕ್ಕಾಗಿ ಕೇಳಿಕೊಂಡಿದ್ದಾರೆ.


ವಿಚಾರಣೆ ವೇಳೆ ಮೊದಲು  94 ಟಿಎಂಸಿ ಮಾತ್ರ ನೀರಿದೆ ಎಂದು ಹೇಳಿದ್ದ ಗೋವಾ ನಂತರ 114 ಟಿಎಂಸಿ, ಕಡೆಗೆ 172 ಟಿಎಂಸಿ ನೀರಿದೆ ಎಂದು ತಿಳಿಸಿದೆ.


ಈ ವಾದ ಪ್ರತಿವಾದಗಳನ್ನು ಆಲಿಸಿರುವ ಪೀಠವು ಮೊದಲು ನೀರಿನ ಲಭ್ಯತೆಯನ್ನು ನಿರ್ಧರಿಸಿ ನಂತರ ಹಂಚಲಿದೆ. ಕರ್ನಾಟಕ ಕುಡಿಯುವ ನೀರಿಗೆ ಬೇಡಿಕೆ ಇಟ್ಟಿರುವುದರಿಂದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವ ವಿಶ್ವಾಸವಿದ್ದು ನ್ಯಾಯಾಧೀಕರಣ ರಾಜ್ಯದ ಪರ ತೀರ್ಪು ನೀಡಬಹುದೆಂಬ ನಂಬಿಕೆ ಇದೆ.