ಮೈಸೂರು:  ಜಿಲ್ಲಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸುರಕ್ಷತೆಯ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗದ ಉಪಾಧ್ಯಕ್ಷ ಎಲ್.ಮುರುಗನ್ ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ವಿ.ಶರತ್ ಚಂದ್ರ ಹಾಗೂ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ನಡೆದ ವಿಭಾಗ ಮಟ್ಟದ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ಹೆಲ್ಮೆಟ್, ಕೈಗಳಿಗೆ ಗ್ಲೌಸ್ ಮತ್ತು ಶೂಗಳ ವ್ಯವಸ್ಥೆಯನ್ನು ಅಧಿಕಾರಿಗಳು ಕಡ್ಡಾಯವಾಗಿ ಮಾಡಬೇಕು. ಹೊರಗುತ್ತಿಗೆ ಪೌರಕಾರ್ಮಿಕರ ಇ.ಎಸ್.ಐ ಸಂಖ್ಯೆ, ಪಿ.ಎಫ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಸಂಬಳದ ಮಾಹಿತಿಯನ್ನು 15 ದಿನದೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.  


ಪೊಲೀಸ್ ಅಧಿಕಾರಿಗಳಿಗೆ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಜನರ ಮೇಲೆ ಕಟ್ಟಿಂಗ್ ಶಾಪ್ ಮತ್ತು ದೇವಾಲಯ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ನಿಂದನೆಗಳನ್ನು ತಡೆಯಲು ಅಧಿಕಾರಿಗಳು ತಂಡವನ್ನು ರಚಿಸಿ ಅಂತಹ ಸ್ಥಳಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ಜೊತೆಗೆ ಅಟ್ರಾಸಿಟಿ ಅಪರಾಧಗಳು ನಡೆಯುವ ಸ್ಥಳಗಳನ್ನು ಗುರುತಿಸುವಂತೆ ಎಲ್.ಮುರುಗನ್ ತಿಳಿಸಿದರು. 


ಅಲ್ಲದೆ, ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೆಲಸ ಮಾಡುತ್ತಿರುವ ಘಟನೆಗಳು ಕಂಡುಬಂದಿದ್ದು ಅಂತಹ ಸ್ಥಳಗಳಿಗೆ ಜಿಲ್ಲಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭೇಟಿ  ನೀಡಿ ಶಿಸ್ತುಕ್ರಮ ಕೈಗೊಂಡು ಮಕ್ಕಳನ್ನು ಶಾಲೆಗಳಿಗೆ ಸೇರಿಸುವಂತೆ ಸೂಚನೆ ನೀಡಿದರು.