Bagalkote Kudachi Railway:  ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲ್ವೆ ಯೋಜನೆಗಳಲ್ಲಿ ಒಂದಾದ 257 ಕಿಲೋಮೀಟರ್ ಉದ್ದದ ಗದಗ- ವಾಡಿ ನಡುವಿನ ಮಾರ್ಗವನ್ನು 2026ರ ಮಾರ್ಚ್ ಒಳಗೆ ಮುಗಿಸುವ ಗಡುವು ಹಾಕಿಕೊಳ್ಳಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಬುಧವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಉತ್ತರ ಕರ್ನಾಟಕದ ಎರಡು ಮುಖ್ಯ ರೈಲ್ವೆ ಯೋಜನೆಗಳಾದ ಗದಗ-ವಾಡಿ ಮತ್ತು ಬಾಗಲಕೋಟೆ-ಕುಡಚಿ ನಡುವಿನ ಮಾರ್ಗಗಳ ಪ್ರಗತಿ ಪರಿಶೀಲನೆ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.


ಒಟ್ಟು ರೂ. 1,922 ಕೋಟಿ ಅಂದಾಜು ವೆಚ್ಚದ ಈ ಯೋಜನೆಯು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ತಲಾ ಶೇಕಡಾ 50ರಷ್ಟು ವೆಚ್ಚ ಹಂಚಿಕೆಯಲ್ಲಿ ನಡೆಯುತ್ತಿದೆ. ಈ ಕಾಮಗಾರಿಗೆ 4,002 ಎಕರೆ ಭೂಮಿ ಅಗತ್ಯವಿದ್ದು, ಈಗಾಗಲೇ 3,945 ಎಕರೆ ಭೂಮಿಯನ್ನು ಕಾಮಗಾರಿಗಾಗಿ ಬಿಟ್ಟುಕೊಡಲಾಗಿದೆ. ಮಿಕ್ಕ 57 ಎಕರೆ ಭೂಮಿಯನ್ನು ಇನ್ನೊಂದು ತಿಂಗಳೊಳಗೆ ಕೊಡಲಾಗುತ್ತದೆ ಎಂದು ಸಚಿವರು ವಿವರಿಸಿದರು.


ಇದನ್ನೂ ಓದಿ- ತಮಿಳುನಾಡಿಗೆ ಕಾವೇರಿ ನೀರು: ರಾಜಧಾನಿ ಬೆಂಗಳೂರಿಗೆ ಜಲಕಂಟಕ..!?


ಗದಗದಿಂದ ತಳಕಲ್ ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್ ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಮುಗಿದಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್ 24ರೊಳಗೆ ಮುಗಿಯಲಿದೆ.ಅದಾದ ಮೇಲೆ ಇಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ಪಾಟೀಲ ತಿಳಿಸಿದರು. ಇನ್ನೊಂದು ಭಾಗದಲ್ಲಿ ವಾಡಿ ಕಡೆಯಿಂದ ಶೋರಾಪುರದವರೆಗೆ ಕಾಮಗಾರಿ ನಡೆಯುತ್ತಿದೆ ಎಂದೂ ಹೇಳಿದರು.


ಗದಗ-ವಾಡಿ ರೈಲು ಮಾರ್ಗ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಒತ್ತು ಕೊಡುವಂತೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಚಿವರನ್ನು ಕೋರಿದರು. ಆಗ ಸಚಿವ ಪಾಟೀಲರು ಸಭೆಯಲ್ಲಿದ್ದ ರೈಲ್ವೆ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗಮನಹರಿಸಲು ಸೂಚಿಸಿದರು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತಂಡಗಳನ್ನು ಕಳುಹಿಸಿ ಗುಣಮಟ್ಟ ಖಾತ್ರಿ ಗೊಳಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.


ಒಟ್ಟಾರೆ, ಈ ರೈಲ್ವೆ ಮಾರ್ಗದ ಕಾಮಗಾರಿ 2026ರ ಮಾರ್ಚ್ ಅವಧಿಯನ್ನು ಮೀರುವಂತಿಲ್ಲ. ಈ ಕಾಲಮಿತಿ ಮೀರಿ ಪುನಃ ಕಾಮಗಾರಿ ವೆಚ್ಚ ಹೆಚ್ಚಳವಾಗದಂತೆ ಗಮನ ವಹಿಸಬೇಕು ಎಂದರು.


ಮತ್ತೊಂದು ಯೋಜನೆಯಾದ, ಬಾಗಲಕೋಟೆ- ಕುಡಚಿ, 142 ಕೋಟಿ ಕಿ.ಮೀ‌. ಉದ್ದದ ರೂ‌ 1,530 ಕೋಟಿ ವೆಚ್ಚದ ಕಾಮಗಾರಿಗೆ ಬೇಕಾಗಿದ್ದ 2,496 ಎಕರೆ ಭೂಮಿಯ ಪೈಕಿ 2,476 ಎಕರೆ ಈಗಾಗಲೇ ಹಸ್ತಾಂತರವಾಗಿದೆ. ಉಳಿದ 20 ಎಕರೆ ಭೂಮಿಯನ್ನು ಸದ್ಯದಲ್ಲೇ ಬಿಟ್ಟುಕೊಡಲಾಗುವುದು. 2025ರ ಡಿಸೆಂಬರ್ ಒಳಗೆ ಈ ಕಾಮಗಾರಿ ಮುಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.


ಇದನ್ನೂ ಓದಿ- ಇಂದು ಸುಪ್ರೀಂಕೋರ್ಟ್‌ನಲ್ಲಿ ನೀರು ಹಂಚಿಕೆ ಅರ್ಜಿ ವಿಚಾರಣೆ


ಇದೇ ವೇಳೆ ಸಚಿವರು ಈ ಯೋಜನೆಯನ್ನು ಸಾಧ್ಯವಾದರೆ 2025ರ ಏಪ್ರಿಲ್ ಒಳಗೆ, ಅಂದರೆ ಆರು ತಿಂಗಳು ಮುಂಚಿತವಾಗಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಕೋರಿದರು.


ಬಾಗಲಕೋಟೆ- ಖಚ್ಚಿದೋಣಿ- ಲೋಕಾಪುರದವರೆಗಿನ 60 ಕಿ.ಮೀ. ರೈಲ್ವೆ ಕಾಮಗಾರಿ 2024ರ ಮಾರ್ಚ್ ವೇಳೆಗೆ ಮುಗಿಯಲಿದೆ. ಆನಂತರ, ಈ ಭಾಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಮತ್ತೊಂದು ಕಡೆ ಕುಡಚಿ ಭಾಗದಿಂದ ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲಸಗಳಿಗೆ ಚಾಲನೆ ಕೊಡಬೇಕಿದೆ. ಕುಡಚಿಯಿಂದ ಜಗದಾಳ್ ವರೆಗಿನ ಕೆಲಸ ಶುರುವಾಗಲಿದೆ ಎಂದರು.


ಶಾಸಕ ಬಸವರಾಜ ರಾಯರೆಡ್ಡಿ ಮತ್ತು ಎಂ.ಎಲ್.ಸಿ. ಹಾಗೂ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಅವರು ನಂತರ ಸಚಿವ ಎಂ ಬಿ ಪಾಟೀಲ ಅವರು ಯೋಜನೆಗಳ ಕಾಮಗಾರಿಗಳ ಬಗ್ಗೆ ಮುತುವರ್ಜಿ ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕೊಪ್ಪಳ ಸಂಸದ ಕರಡಿ ಸಂಗಣ್ಣ, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ರೈಲ್ವೆ ಅಧಿಕಾರಿಗಳು, ಮೂಲಸೌಕರ್ಯ ಇಲಾಖೆ ಎಸಿಎಸ್ ಗೌರವ ಗುಪ್ತ, ಹಾಜರಿದ್ದರು. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.