`ಸ್ರ್ತೀ ಪ್ರಧಾನ ದೈವಾರಾಧನೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ`: ಇದುವೇ ಇಲ್ಲಿನ ಪದ್ಧತಿ
ಜಾತ್ರೆ-ಉತ್ಸವಗಳು ಬಂತೆಂದರೆ ಅಲ್ಲಿ ವ್ಯಾಪಾರ ವಹಿವಾಟುಗಳು ನಡೆಯುವುದು ಸಾಮಾನ್ಯ. ಆದರೆ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಯಾವುದೇ ವ್ಯಾಪಾರ ನಡೆಸುವಂತಿಲ್ಲ.
ಮಂಗಳೂರು: ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯೆಂದರೆ ಮೊದಲಿಗೆ ನೆನಪಾಗುವುದು ಅಲ್ಲಿನ ವಿಶಿಷ್ಟ ಪದ್ಧತಿ, ದೈವಾರಾಧನೆ, ಸಂಪ್ರದಾಯ ಹೀಗೆ ಹಲವಾರು. ಇಲ್ಲಿನ ಜನರು ದೇವರಂತೆ ದೈವಗಳನ್ನು ಅಪಾರ ಭಕ್ತಿಯಿಂದ ಆರಾಧನೆ ಮಾಡುತ್ತಾರೆ. ದೈವಗಳ ನುಡಿಯೆಂದರೆ ವೇದವಾಕ್ಯದಂತೆ ಪಾಲಿಸುತ್ತಾರೆ. ಅಂತೆಯೇ ದೈವಗಳು ಅಭಯ ನೀಡುತ್ತಾ ಬೆಂಗಾವಲಾಗಿ ನಮ್ಮ ಜೊತೆ ಬರುತ್ತದೆ ಎಂಬುದು ತುಳುನಾಡಿನ ಜನರ ನಂಬಿಕೆ. ಇಂತಹ ನಂಬಿಕೆಗೆ ಉದಾಹರಣೆ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿರುವ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ.
ಇದನ್ನು ಓದಿ: Labor Day: ಮೇ 1 ಕಾರ್ಮಿಕರ ದಿನ: ದಿನಾಚರಣೆಯ ಹಿಂದಿದೆ ನಿಮಗರಿಯದ ಸತ್ಯ!
ಜಾತ್ರೆ-ಉತ್ಸವಗಳು ಬಂತೆಂದರೆ ಅಲ್ಲಿ ವ್ಯಾಪಾರ ವಹಿವಾಟುಗಳು ನಡೆಯುವುದು ಸಾಮಾನ್ಯ. ಆದರೆ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಯಾವುದೇ ವ್ಯಾಪಾರ ನಡೆಸುವಂತಿಲ್ಲ. ಇದುವೇ ಇಲ್ಲಿನ ವಿಶೇಷ. ದೇವಿ ಉಳ್ಳಾಲ್ತಿಗೆ ಪ್ರಿಯವಾದ ಮಲ್ಲಿಗೆಗೆ ಮಾತ್ರ ಹಣ ಕೊಟ್ಟು ಖರೀದಿ ಮಾಡಬಹುದು. ವಿನಃ ಯಾವುದೇ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಇದು ಪುರಾತನ ಕಾಲದಿಂದ ಬಂದಂತಹ ಕಟ್ಟುಪಾಡು, ತಾಯಿಯ ಆಜ್ಞೆ ಎಂಬಂತೆ ಇಂದಿಗೂ ಪಾಲಿಸಲಾಗುತ್ತದೆ.
ಉಳ್ಳಾಲ್ತಿ ದೈವಾರಾಧನೆ:
ಪಾರ್ವತಿಯ ಸ್ವರೂಪ ಎಂದು ಉಳ್ಳಾಲ್ತಿ ಅಮ್ಮನನ್ನು ತುಳುನಾಡಿನಲ್ಲಿ ಆರಾಧನೆ ಮಾಡಲಾಗುತ್ತದೆ. ತುಳುನಾಡಿನಲ್ಲಿ ಒಟ್ಟು ಪ್ರಮುಖವಾದ ಐದು ಉಳ್ಳಾಲ್ತಿ ದೈವಸ್ಥಾನಗಳಿವೆ. ಅವುಗಳೆಂದರೆ ಮಾಣಿ, ಅನಂತಾಡಿ, ಬಲ್ನಾಡು, ಕೆಳಿಂಜ ಮತ್ತು ಕೇಪು. ಈ ಐದು ಕ್ಷೇತ್ರಗಳಲ್ಲಿ ಆರಾಧಿಸಲ್ಪಡುವ ಉಳ್ಳಾಲ್ತಿ ದೈವಗಳ ಹಿಂದೆ ಒಂದೊಂದು ಕಥೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡು ಗ್ರಾಮದಲ್ಲಿರುವ ಉಳ್ಳಾಲ್ತಿ ಅಮ್ಮನಿಗೆ ಮಲ್ಲಿಗೆಯೆಂದರೆ ಪಂಚಪ್ರಾಣ. ಮಲ್ಲಿಗೆಯನ್ನು ಹರಕೆಯಾಗಿ ಒಪ್ಪಿಸುತ್ತೇವೆ ಎಂದು ಹೇಳಿ ಬೇಡಿಕೊಂಡರೆ ಕಷ್ಟ ನಿವಾರಿಸಿ, ಇಷ್ಟಾರ್ಥ ಸಿದ್ಧಿತ್ತಾಳೆ ಈ ತಾಯಿ. ಇನ್ನು ಬಲ್ನಾಡಿನ ಕ್ಷೇತ್ರದ ಆಚರಣೆ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ನಡೆಯುವ ಆಚರಣೆಗಿಂತ ಕೊಂಚ ಭಿನ್ನವಾಗಿದೆ.
ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆಗೂ ಉಳ್ಳಾಲ್ತಿ ಜಾತ್ರೋತ್ಸವಕ್ಕೂ ನಂಟು:
ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಕ್ಷಿಣ ಕನ್ನಡ ಹೊರತಾಗಿ ಹೊರ ಪ್ರದೇಶಗಳಲ್ಲೂ ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಜಾತ್ರೆ ಮುಗಿದು, ಧ್ವಜಾಅವರೋಹಣವಾದ ಮರುದಿನವೇ ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವಕ್ಕೆ ಗೊನೆ ಕಡಿಯುವ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ವರ್ಷ ಏಪ್ರಿಲ್ 20ರಂದು ಪುತ್ತೂರು ಜಾತ್ರೆ ಕೊನೆಗೊಂಡರೆ 28ರಂದು ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಯುವುದು ಇಲ್ಲಿನ ವಾಡಿಕೆ.
ಇಲ್ಲಿ ಅಂಗಡಿ ಹಾಕುವಂತಿಲ್ಲ:
ಜಾತ್ರೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆಸುಪಾಸಿನಲ್ಲಿ ವ್ಯಾಪಾರ ಮಳಿಗೆಗಳನ್ನು ಹಾಕುವಂತಿಲ್ಲ. ವ್ಯಾಪಾರ ಎನ್ನುವ ಪದವೂ ಈ ಕ್ಷೇತ್ರದ ಸುತ್ತಮುತ್ತ ಜಾತ್ರೋತ್ಸವದ ಸಂದರ್ಭದಲ್ಲಿ ಕೇಳಿ ಬರುವಂತಿಲ್ಲ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಎಲ್ಲವನ್ನೂ ಉಚಿತವಾಗಿಯೇ ನೀಡಬೇಕಾದ ಕಟ್ಟುಪಾಡು ಪುರಾತನ ಕಾಲದಿಂದ ನಡೆದುಬರುತ್ತಿದೆ. ಅಮ್ಮನಿಗೆ ಪ್ರಿಯವಾದ ಮಲ್ಲಿಗೆ ಹೊರತುಪಡಿಸಿ ಇಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತದೆ.
ಇದನ್ನು ಓದಿ: Hindi Imposition: ‘ಹಿಂದಿ ಮಾತನಾಡಲು ಬಯಸದವರು ದೇಶ ಬಿಟ್ಟು ತೊಲಗಲಿ’
ನೇಮೋತ್ಸವ ಮಹಿಳೆಯರು ನೋಡುವಂತಿಲ್ಲ:
ಬಲ್ನಾಡು ಉಳ್ಳಾಲ್ತಿ ಅಮ್ಮನ ದೈವಾರಾಧನೆ ಸ್ತ್ರೀ ಪ್ರಧಾನವಾಗಿದ್ದರೂ ಸಹ ಈ ನೇಮೋತ್ಸವವನ್ನು ಮಹಿಳೆಯರು ನೋಡುವಂತಿಲ್ಲ. ನೇಮೋತ್ಸವ ಆಗುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಆಸುಪಾಸು ಮಹಿಳೆಯರು ಬರುವಂತಿಲ್ಲ. ಇದು ಇತ್ತೀಚಿನ ಸಂಪ್ರದಾಯವಲ್ಲ. ಪುರಾತನ ಕಾಲದಿಂದ ನಡೆದುಬಂದ ಈ ಕಟ್ಟುಕಟ್ಟಲೆಯನ್ನು ಇಲ್ಲಿನ ಜನರು ಇಂದಿಗೂ ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಉಳ್ಳಾಲ್ತಿ ದೈವಕ್ಕೆ ಇಷ್ಟವಾದ ಮಲ್ಲಿಗೆಯನ್ನು ಮಹಿಳೆಯರು ಪುರುಷರ ಮೂಲಕವೇ ಹರಕೆಯಾಗಿ ಒಪ್ಪಿಸುತ್ತಾರೆ. ಇನ್ನು ದೈವಕ್ಕೆ ಹರಕೆಯಾಗಿ ಬರುವ ಸೀರೆಯನ್ನು ಮಹಿಳೆಯರಿಗೇ ನೀಡುವ ಉದಾರತೆಯೂ ಈ ಕ್ಷೇತ್ರದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.