ಬೆಂಗಳೂರು: ಕಡೆಗೂ ಬೆಂಗಳೂರಿನ ಕೆ.ಜೆ. ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ (A51) ಸಂಪತ್ ರಾಜ್ ಬಂಧನವಾಗಿದೆ. ತಿಂಗಳಾನುಗಟ್ಟಲೆ ತಲೆ ಮರೆಸಿಕೊಂಡು‌ ಓಡಾಡುತ್ತಿದ್ದ ಸಂಪತ್ ರಾಜ್ ಬಂಧಿಸುವಲ್ಲಿ ಪೊಲೀಸರು ಕಡೆಗೂ ಯಶಸ್ಸು ಸಾಧಿಸಿದ್ದಾರೆ. ಈ ಸಂಪತ್ ರಾಜ್ ತಿಂಗಳಾದ್ಯಂತ ಎಲ್ಲಿ ಅಡಗಿ ಕುಳಿತಿದ್ದರು ಎನ್ನುವುದೇ ಕುತೂಹಲಕಾರಿ ಸಂಗತಿ.


COMMERCIAL BREAK
SCROLL TO CONTINUE READING

ಕೆ.ಜೆ. ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ (KJ Halli and DJ Halli riot) ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ (Sampath Raj) ಮೊದಲಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು (CCB) ವಿಚಾರಣೆಗೆ ಕರದಾಗ ಸಕಾರಾತ್ಮಕವಾಗಿ‌ಯೇ ಸ್ಪಂದಿಸಿದರು. ಯಾವಾಗ ಬಂಧನವಾಗುತ್ತದೆ ಎಂಬ ಸುಳಿವು ಸಿಕ್ಕಿತೋ ಆಗಿನಿಂದ ತಮ್ಮ ಅಸಲಿ ಆಟ ಶುರು ಮಾಡಿದರು.


ಒಂದಲ್ಲ ಒಂದು ರೀತಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸಂಪತ್ ರಾಜ್ ಮೊದಲಿಗೆ COVID-19 ಕಾಯಿಲೆ ಇದೆ ಎಂದು ಆಸ್ಪತ್ರೆ ಸೇರಿಕೊಂಡರು. ಆನಂತರ ತಲೆ ಮರೆಸಿಕೊಂಡು ಪೊಲೀಸರಿಗೆ ಇನ್ನಿಲ್ಲದಂತೆ ಕಾಡಿದರು. ಈಗಲೂ ಸಂಪತ್ ರಾಜ್ ಬಂಧನವಾಗದಿದ್ದರೆ ಮುಂದಿನ ವೇಳೆ ನ್ಯಾಯಾಲಯದಲ್ಲಿ ಪೊಲೀಸರಿಗೆ ಛೀಮಾರಿ ಕಟ್ಟಿಟ್ಟಬುತ್ತಿ ಆಗಿತ್ತು. ಹೀಗೆ ಪೊಲೀಸರಿಗೂ ಪೀಕಲಾಟ ತಂದಿದ್ದ ಸಂಪತ್ ರಾಜ್ ಈಗ ಅಂದರ್ ಆಗಿದ್ದಾರೆ. 


ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಕಾರ್ಪೂರೇಟರ್ ಕುಮ್ಮಕ್ಕು: ವಿಚಾರಣೆ ವೇಳೆ ಅಖಂಡ ಹೇಳಿಕೆ


ಕೆ.ಜೆ. ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಯಲ್ಲದೆ ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ ಪ್ರಕರಣದಲ್ಲೂ ಸಂಪತ್ ರಾಜ್ ಆರೋಪಿ. ತನ್ನ ರಾಜಕೀಯ ಭವಿಷ್ಯಕ್ಕಾಗಿ ಹಾಲಿ ಶಾಸಕನ ಮನೆಗೆ ಅಕ್ಷರಶಃ ಕೊಳ್ಳಿ ಇಟ್ಟ ರಾಜ್ಯದ ಮೊದಲ‌ ರಾಜಕಾರಣಿ ಎನ್ನಬಹುದೇನೋ ಇವರನ್ನು.


ಇಂಥ ಸಂಪತ್ ರಾಜ್ (Sampath Raj) ಇಷ್ಟು ದಿನ‌ಅಡಗಿ ಕುಳಿತಿದ್ದು ಎಲ್ಲಿ ಎಂಬುದು ಇನ್ನೊಂದು ರೋಚಕ ಅಧ್ಯಾಯ. ಸಿನಿಮೀಯ ರೀತಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಎಲ್ಲೂ ಕೂಡ ಒಂದೆರಡು ದಿನಗಳಿಗಿಂತ ಹೆಚ್ಚಾಗಿ ಇರುತ್ತಿರಲಿಲ್ಲ. ಮೊಬೈಲ್ ಬಳಸಿದರೆ ಸಿಕ್ಕಿ ಬೀಳುತ್ತೇನೆ ಎನ್ನುವ ಕಾರಣಕ್ಕೆ ತಮ್ಮ ಮೊಬೈಲ್ ಬಳಸುತ್ತಿರಲಿಲ್ಲ. ತೀರಾ ಹತ್ತಿರದಲ್ಲಿದ್ದವರ ಮೊಬೈಲ್ ಗಳನ್ನು ಪೊಲೀಸರು ಟ್ರ್ಯಾಕ್ ಮಾಡುತ್ತಿರುತ್ತಾರೆಂದು ಅವರ ಫೋನ್ ಗಳನ್ನು ಬಳಸುತ್ತಿರಲಿಲ್ಲ. 


ಬೆಂಗಳೂರು ಗಲಭೆ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ನವೀನ್


ಇಷ್ಟೇಯಲ್ಲ, ಕರ್ನಾಟಕವಲ್ಲದೆ ತಮಿಳುನಾಡು ಮತ್ತು ಕೇರಳಕ್ಕೂ ಹೋಗಿ ಅಲ್ಲಿಯೂ ಬೇರೆ ಬೇರೆ ಊರುಗಳಲ್ಲಿ ತಲೆ ಮರೆಸಿಕೊಂಡಿದ್ದರು. ಹೀಗೆ ಒಂದು ಕಡೆಯಿಂದ ಒಂದು ಕಡೆಗೆ ಸಂಚರಿಸುತ್ತಿದ್ದ ಸಂಪತ್ ರಾಜ್ ಸೋಮವಾರ (ನವೆಂಬರ್ 16) ಬೆಂಗಳೂರಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ಮತ್ತು ನ್ಯಾಯಾಲಯದ ಹೆದರಿಕೆಯಿಂದ ತನಿಖೆಯನ್ನು ತೀವ್ರಗೊಳಿಸಿದ್ದ ಸಿಟಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಸಂಪತ್ ರಾಜ್ ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ಸ್ನೇಹಿತನ ನಿವಾಸಕ್ಕೆ ಬರುತ್ತಿರುವ ಸುಳಿವು ಸಿಕ್ಕಿದೆ. ಈ ಅವಕಾಶ ಕಳೆದುಕೊಳ್ಳಬಾರದೆಂದು‌ ನಿಶ್ಚಯಿಸಿದ ಪೊಲೀಸರು ತಮ್ಮ ‌ಕಾರ್ಯಾಚರಣೆಯ ಸುಳಿವನ್ನು ಬಿಟ್ಟುಕೊಡದೆ ಕಡೆಗೂ ಸಂಪತ್ ರಾಜ್ ಅವರನ್ನು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ. ಸಂಪತ್ ರಾಜ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ.