ವರ್ಷದ ಮೊದಲ ದಿನ ಐದು ಹೆಣ್ಣು ಮಕ್ಕಳ ಜನನ: ಬಿಬಿಎಂಪಿಯಿಂದ ತಲಾ 5 ಲಕ್ಷ ರೂ. ಠೇವಣಿ
ಹೊಸ ವರ್ಷದ ಮೊದಲ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಐದು ಹೆಣ್ಣು ಮಕ್ಕಳ ಜನನ.
ಬೆಂಗಳೂರು: ಹೊಸ ವರ್ಷದ ಮೊದಲ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಐದು ಹೆಣ್ಣು ಮಕ್ಕಳು ಜನಿಸಿದ್ದು, ‘ಪಿಂಕ್ ಬೇಬಿ’ ಯೋಜನೆಯಡಿ ಪಾಲಿಕೆ ವತಿಯಿಂದ ಮಗುವಿನ ಹೆಸರಿನಲ್ಲಿ ತಲಾ 5 ಲಕ್ಷ ರೂ. ಠೇವಣಿ ಇಡಲಾಗಿದೆ.
ಕಳೆದ ವರ್ಷದಿಂದ ಪಾಲಿಕೆ ಆಸ್ಪತ್ರೆಯಲ್ಲಿ ಹುಟ್ಟುವ ಮೊದಲ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕಾಗಿ ಮಗುವಿನ ತಾಯಿಯ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಡುವುದಾಗಿ ಮಾಜಿ ಮೇಯರ್ ಆರ್.ಸಂಪತ್ರಾಜ್ ಘೋಷಿಸಿದ್ದರು. ಅದರಂತೆ, ಜನವರಿ ರಾತ್ರಿ ಹುಟ್ಟಿದ್ದ ಮೊದಲ ಹೆಣ್ಣು ಮಗುವಿನ ಪೋಷಕರಿಗೆ 5 ಲಕ್ಷ ರೂ. ಚೆಕ್ ಕೂಡಾ ವಿತರಣೆ ಮಾಡಿದ್ದರು.
ಅದನ್ನು ಬಿಬಿಎಂಪಿ ಈ ಬಾರಿಯೂ ಮುಂದುವರಿಸಿದ್ದು, ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಮೊದಲು ಜನಿಸುವ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕೆ ತಲಾ 5 ಲಕ್ಷ ರೂ. ಠೇವಣಿ ಇಡಲು ಕಳೆದ ಬಜೆಟ್ನಲ್ಲಿ 1.20 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಎಲ್ಲೆಲ್ಲಿ ಮಕ್ಕಳ ಜನನ:
ನಗರದ ತಾವರೆಕೆರೆ, ಗಂಗಾನಗರ, ರಾಜಾಜಿನಗರ, ನಂದಿನಿ ಲೇಔಟ್, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆಗಳಲ್ಲಿ ಹೊಸ ವರ್ಷದಂದು(ಮಂಗಳವಾರ) ಒಟ್ಟು ಐದು ಹೆಣ್ಣುಮಕ್ಕಳು ಜನಿಸಿವೆ. ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಹೆಣ್ಣು ಶಿಶುಗಳು ಸಹಜವಾಗಿ ಹುಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಪಿಂಕ್ ಬೇಬಿ ಯೋಜನೆಗೆ ಅರ್ಹ ಶಿಶುಗಳು ಎಂದು ಘೋಷಿಸಿದ್ದಾರೆ.
ಪಿಂಕ್ ಬೇಬಿ ಹೆಸರಿನಲ್ಲಿ ಕಳೆದ ವರ್ಷ ಈ ಯೋಜನೆ ಜಾರಿ ಮಾಡಲಾಗಿತ್ತು. ಆದರೆ, ಆಗ ವೇಳೆಯ ನಿರ್ಬಂಧವಿತ್ತು. ಈ ಬಾರಿ ಅದನ್ನು ಸಡಿಲಿಸಲಾಗಿತ್ತು, ಜ. 1ರಂದು ಯಾವುದೇ ವೇಳೆಯಲ್ಲಿ ಸಹಜ ಹೆರಿಗೆಯ ಮೂಲಕ ಜನಿಸುವ ಮಗುವಿನ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇರಿಸಲಾಗುವುದು ಎಂದು ಮೇಯರ್ ಗಂಗಾಂಬಿಕ ತಿಳಿಸಿದ್ದರು.