ಸಂಸದರಿಗೆ ಐಫೋನ್-ಎಕ್ಸ್ ಗಿಫ್ಟ್; ಬಿಜೆಪಿ ತೀವ್ರ ಟೀಕೆ
ಐಫೋನ್-ಎಕ್ಸ್ ಗಿಫ್ಟ್ ನೀಡಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ಬಿಜೆಪಿ ಸಂಸದರು ಆ ಗಿಫ್ಟ್ ಅನ್ನು ತಿರಸ್ಕರಿಸಿದ್ದಾರೆ.
ಬೆಂಗಳೂರು: ಕಾವೇರಿ ನದಿ ನೀರು ಪ್ರಾಧಿಕಾರ ಮತ್ತು ನೀರು ಹಂಚಿಕೆ ಗೆ ಸಂಬಂಧಿಸಿದಂತೆ ಸರ್ಕಾರ ದೆಹಲಿಯಲ್ಲಿ ಇಂದು ಸರ್ವಪಕ್ಷಗಳ ಸಂಸದರ ಸಭೆ ಏರ್ಪಡಿಸಿದ್ದು, ಈ ಸಭೆಗೆ ಎಲ್ಲಾ ಸಂಸದರಿಗೂ ಆಹ್ವಾನ ನಿದಲಾಗಿತ್ತು. ಆದರೆ, ಲೆದರ್ ಬ್ಯಾಗ್ ಜೊತೆ ಸಂಸದರಿಗೆ ಐ ಫೋನ್ ಗಿಫ್ಟ್ ನೀಡಿದ್ದು, ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ರೈತರ ಸಾಲ ಮನ್ನಾ ಮಾಡಲು ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದೀಗ ಎಲ್ಲಾ ಸಂಸದರಿಗೆ ದುಬಾರಿ ಐಫೋನ್-ಎಕ್ಸ್ ಗಿಫ್ಟ್ ನೀಡಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ಬಿಜೆಪಿ ಸಂಸದರು ಆ ಗಿಫ್ಟ್ ಅನ್ನು ತಿರಸ್ಕರಿಸಿದ್ದು, ಇದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಜೆಪಿ, ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಹಣವಿಲ್ಲ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಹಣವಿಲ್ಲ, ಆದರೆ ಸಂಸದರಿಗೆ ದುಬಾರಿ ಗಿಫ್ಟ್ ನೀಡಲು ಹಣವಿದೆಯೇ ಎಂದು ಲೇವಡಿ ಮಾಡಿದೆ. ಅಲ್ಲದೆ, ಇದು ಪ್ರಜಾಪ್ರಭುತ್ವಕ್ಕೇ ಅವಮಾನ ಮಾಡಿದಂತೆ ಎಂದಿದೆ.
ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಈ ಗಿಫ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ಗಿಫ್ಟ್ ಕಳುಹಿಸಿರುವುದು ನಾನು, ಕುಮಾರಸ್ವಾಮಿ ಅವರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವೈಯಕ್ತಿಕ ಹೃದಯ ಶ್ರೀಮಂತಿಕೆಯಿಂದ ಸಂಸದರಿಗೆ ಗಿಫ್ಟ್ ನೀಡಿದ್ದೆ. ಇದರ ಹಿಂದೆ ಯಾವ ರಾಜಕೀಯ ಉದ್ದೇಶವೂ ಇಲ್ಲ ಎಂದಿದ್ದಾರೆ.
ಒಟ್ಟಾರೆ ಈ ಐಫೋನ್-ಎಕ್ಸ್ ಗಿಫ್ಟ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.