ಬೆಳಗಾವಿ: ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿದ ಉದ್ದೇಶವೇ ಉತ್ತರ ಕರ್ನಾಟಕ ಭಾಗದ ಜನರಿಗೆ ನ್ಯಾಯ ಒದಗಿಸುವುದು.. ಬಿಜೆಪಿ ಸರ್ಕಾರದ ಅಲಕ್ಷ್ಯ ಧೋರಣೆಯಿಂದಾಗಿ ಈ ಉದ್ದೇಶದ ಈಡೇರಿಕೆ ಆಗುತ್ತಿಲ್ಲ. ಇದು ಉತ್ತರ ಕರ್ನಾಟಕ ವಿರೋಧಿ ಸರ್ಕಾರ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಸಿದ್ಧರಾಮಯ್ಯ ಸದನದಲ್ಲಿ ಮಾತನಾಡಿದ್ದಿಷ್ಟು...


ಕಾಂಗ್ರೆಸ್ ಸರ್ಕಾರ ರಚಿಸಿದ್ದ ಡಾ. ನಂಜುಂಡಪ್ಪನವರ ನೇತೃತ್ವದ ಉನ್ನತಾಧಿಕಾರ ಸಮಿತಿ 2002 ರಲ್ಲಿ ನೀಡಿದ ವರದಿಯಲ್ಲಿ ಮುಂದಿನ ಎಂಟು ವರ್ಷಗಳಲ್ಲಿ ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ಹಣವನ್ನು ಖರ್ಚು ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಇದು ನಮ್ಮ ಪಕ್ಷದ ಬದ್ದತೆ.


ಇದನ್ನೂ ಓದಿ : ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ರಾಜ್ಯ ವಿಧಾನಸಭೆ


ನಂಜುಂಡಪ್ಪ ವರದಿ ಜಾರಿಯಾಗಿದ್ದು 2007 - 08 ರಲ್ಲಿ. ಅಲ್ಲಿಂದ ಪ್ರತಿ ವರ್ಷ ರೂ. 2000 ಕೋಟಿ ಹಣವನ್ನು 2016 ರ ವರೆಗೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಟು ವರ್ಷದ ಗಡುವು ಮುಗಿದು ಹೋದರೂ ಅದನ್ನು ಮತ್ತೆ ಐದು ವರ್ಷ ಮುಂದುವರೆಸಬೇಕು ಎಂದು ಆದೇಶಿಸಿ, ವಾರ್ಷಿಕ ರೂ. 3,000 ಕೋಟಿ ಅನುದಾನ ನೀಡಿದ್ದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿ 371(J) ಕಲಂನಡಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬರೆದಿದ್ದ ಪತ್ರವನ್ನು ತಿರಸ್ಕರಿಸಿದ್ದು ಆಗಿನ ಅಧಿಕಾರ ರೂಢ ಎನ್.ಡಿ.ಎ ಸರ್ಕಾರವಲ್ಲವೇ?


ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಪತ್ರಕ್ಕೆ ಅಂದಿನ ಉಪ ಪ್ರಧಾನಿಗಳು ಹಾಗೂ ಗೃಹ ಸಚಿವರು ಆಗಿದ್ದ ಅಡ್ವಾಣಿಯವರು ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ನಿಷ್ಠುರವಾಗಿ ಉತ್ತರ ನೀಡಿದ್ದನ್ನು ಉತ್ತರ ಕರ್ನಾಟಕದ ಜನ ಮರೆತಿಲ್ಲ, ಮರೆಯಲೂಬಾರದು.


eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ


2013 ರ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೃಷ್ಣ ಹಾಗೂ ಕಾವೇರಿ ನದಿ ಕಣಿವೆ ಪ್ರದೇಶದ ನೀರಾವರಿ ಯೋಜನೆಗಳಿಗಾಗಿ ವಾರ್ಷಿಕ ರೂ.10,000 ಕೋಟಿ ಅನುದಾನ ನೀಡುತ್ತೇವೆ ಎಂಬ ಭರವಸೆ ನೀಡಿದ್ದೆವು. ನಮ್ಮ ಐದು ವರ್ಷಗಳ ಅವಧಿಯಲ್ಲಿ 52,000 ಕೋಟಿ ರೂ ಹಣ ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿದ್ದೇವೆ.ಬಿಜೆಪಿ ಸರ್ಕಾರ 2008 ರಿಂದ 2013 ರ ವರೆಗೆ ನೀರಾವರಿ ಉದ್ದೇಶಕ್ಕಾಗಿ ಖರ್ಚು ಮಾಡಿರುವ ಅನುದಾನ ರೂ. 17,734 ಕೋಟಿ. ಬಿಜೆಪಿ ಅವಧಿಯಲ್ಲಿ ಖರ್ಚಾದ ಮೂರು ಪಟ್ಟು ಹಣವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದ್ದೆವು.


ಬಿಜೆಪಿಯವರು 2018ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸುಜಲಾಂ, ಸುಫಲಾಂ ಯೋಜನೆಯಡಿ 1.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಿದೆ.


ಆಲಮಟ್ಟಿ ಜಲಾಶಯವನ್ನು 519 ಮೀಟರ್ ನಿಂದ 524 ಮೀಟರ್ ಗೆ ಏರಿಸಿ, ಭೂಮಿ ಕಳೆದುಕೊಂಡವರಿಗೆ ರೂ. 25 - 30 ಲಕ್ಷ ಪರಿಹಾರ ನೀಡಲು ಸುಮಾರು ರೂ. 1.5 ಲಕ್ಷ ಕೋಟಿ ಖರ್ಚು  ಮಾಡುವುದಾಗಿ ಸದನದಲ್ಲಿ ಯಡಿಯೂರಪ್ಪ ಹೇಳಿದ್ದರು. ಎಲ್ಲಿದೆ ದುಡ್ಡು?.


ಇದನ್ನೂ ಓದಿ : ಮತಾಂತರ ನಿಷೇಧ ಕಾಯ್ದೆ ಆರ್.ಎಸ್.ಎಸ್ ಮತ್ತು ಬಿಜೆಪಿ ಸರ್ಕಾರದ ಕೂಸು- ಸಿದ್ಧರಾಮಯ್ಯ


ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದಿದೆ, ಅವರ ಪ್ರಣಾಳಿಕೆಯ ಭರವಸೆ ಪ್ರಕಾರ ಈಗ ಕನಿಷ್ಠ 90,000 ಕೋಟಿ ಹಣ ಖರ್ಚು ಮಾಡಬೇಕಿತ್ತಲ್ಲವಾ? ಆದರೆ ಖರ್ಚಾದ ಒಟ್ಟು ಹಣ ರೂ. 33,835 ಕೋಟಿ ಮಾತ್ರ. ಈ ಸರ್ಕಾರ ಹೇಳೋದೊಂದು, ಮಾಡೋದೊಂದು.


ನಮ್ಮ ಐದು ವರ್ಷಗಳ ಆಡಳಿತದಲ್ಲಿ ನೀರಾವರಿ ಗೊಳಪಟ್ಟ ಪ್ರದೇಶ ಒಟ್ಟು 6.54 ಲಕ್ಷ ಎಕರೆ. ಅಂದರೆ ರಾಜ್ಯದ ಒಟ್ಟು ನೀರಾವರಿ ಪ್ರದೇಶದಲ್ಲಿ ಶೇ. 10 ನಮ್ಮ ಅವಧಿಯ ಕೊಡುಗೆಯಾಗಿದೆ.ನಾವು ನುಡಿದಂತೆ ನಡೆದಿದ್ದೇವೆ, ಬಿಜೆಪಿ ಅವರದು ಕೊಟ್ಟ ಭರವಸೆಗಳನ್ನು ಈಡೇರಿಸದ ವಚನ ಭ್ರಷ್ಟ ಸರ್ಕಾರ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.