ಶಿವಮೊಗ್ಗ: ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಟದಿಂದಾಗಿ ಶಿವಮೊಗ್ಗ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಬಿಜೆಪಿಯಿಂದ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದಿಂದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭದ್ರಾವತಿಯಲ್ಲಿಂದು ರೋಡ್ ಶೋ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಈಗಾಗಲೇ ಹುಬ್ಬಳ್ಳಿಗೆ ಬಂದಿಳಿದಿರುವ ಅಮಿತ್ ಶಾ, ಇಂದು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಗೆ ತೆರಳಲಿದ್ದು, ಬೆಳಿಗ್ಗೆ 11 ಗಂಟೆಗೆ ಭದ್ರಾವತಿಯ ರಂಗಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ರೋಡ್ ಶೋ ನಡೆಸಲಿದ್ದು ಬಳಿಕ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.


ಈ ಸಂದರ್ಭದಲ್ಲಿ ಮಾಜಿ ಮಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅಮಿತ್ ಶಾ ಅವರಿಗೆ ಸಾಥ್ ನೀಡಲಿದ್ದಾರೆ.


ಶಿವಮೊಗ್ಗದಲ್ಲಿಂದು ಜೆಡಿಎಸ್ ವರಿಷ್ಠರಿಂದ ಮತ ಬೇಟೆ;
ಬಿಜೆಪಿ ರಾಷ್ಟ್ರಾಧ್ಯಕ್ಷರು ಶಿವಮೊಗ್ಗದಲ್ಲಿ ಬೆಳಿಗ್ಗೆ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ, ಸಂಜೆ ವೇಳೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೂಡಾ ಶಿವಮೊಗ್ಗದಲ್ಲಿ ರೋಡ್ ಶೋ ನಡೆಸಿ ಮಧು ಬಂಗಾರಪ್ಪ ಪರ ಮತಯಾಚನೆ ಮಾಡಲಿದ್ದಾರೆ.