ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಮಲ ಪಾಳಯ ತಾಲೀಮು ಆರಂಭಿಸಿದೆ. ಕಳೆದ ಭಾನುವಾರವಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ರಣಕಹಳೆ ಮೊಳಗಿಸಿದ್ದರು. ಇದರ ಬೆನ್ನಲ್ಲೇ ಈಗ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಈ ಬಾರಿ 22 ಸೀಟುಗಳನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಬಿಜೆಪಿ, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಖಾಡಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಮೋದಿ ಭೇಟಿ ಬೆನ್ನಲ್ಲೇ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಕಮಲ ಪಾಳೆಯದಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. 


ಇಂದು ಬಿಸಿಲ ನಾಡು ರಾಯಚೂರು ಹಾಗೂ ಗಣಿನಾಡು ಬಳ್ಳಾರಿಗೆ ಭೇಟಿ ನೀಡಲಿರುವ ಶಾ, ಮಧ್ಯಾಹ್ನ 3 ಗಂಟೆಗೆ ಬಳ್ಳಾರಿ ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು 3.50ಕ್ಕೆ ಹೆಲಿಕಾಪ್ಟರ್ ಮೂಲಕ ಸಿಂಧನೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಸಂಜೆ 4 ಗಂಟೆಗೆ ನಡೆಯುವ ಮೂರು ಜಿಲ್ಲೆಗಳ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಹೊಸಪೇಟೆಯಲ್ಲಿ ನಡೆಯುವ ಚಿಂತನಶೀಲರ ಸಭೆಯಲ್ಲಿ ಭಾಗಿಯಾಗಿಯಾಗುವರು ಹಾಗೂ ಐದು ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳ ಜೊತೆ ಸಭೆ ನಡೆಸಲಿದ್ದು ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.



ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಸಂಚಲನ ಮೂಡಿಸಲಿರುವ 'ಶಾ' ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ  ಮತ್ತು ದಾವಣಗೆರೆ ಜಿಲ್ಲೆಗಳ ಬಿಜೆಪಿ ಪ್ರಮುಖ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.


ಲೋಕಸಭೆ ಚುನಾವಣೆ ಸಿದ್ದತೆ ಒಂದೆಡೆಯಾದರೆ, ರಾಜ್ಯದಲ್ಲಿ ಬಾರೀ ಸಂಚಲನ ಎಬ್ಬಿಸಿರುವ 'ಆಪರೇಶನ್ ಆಡಿಯೋ' ವೇಳೆಯೇ ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡುತ್ತಿರುವುದು ಕುತೂಹಲ ಕೆರಳಿಸಿದೆ.