ನವದೆಹಲಿ: ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಗುರುವಾರ ರಾತ್ರಿ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಹಾಲಿ 15 ಸಂಸದರ ಪೈಕಿ 14 ಮಂದಿ ಮತ್ತೆ ಅವಕಾಶ ಪಡೆದುಕೊಂಡಿದ್ದರೆ ಕೊಪ್ಪಳ ಕ್ಷೇತ್ರದ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ.


COMMERCIAL BREAK
SCROLL TO CONTINUE READING

ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೊಡಬೇಕೆಂದು ನಿಶ್ಚಯವಾಗಿದೆಯಾದರೂ ಆ ಕ್ಷೇತ್ರದ ಇನ್ನೊಬ್ಬ ಪ್ರಮುಖ ಆಕಾಂಕ್ಷಿ ಸಿ.ಬಿ. ಚಂದ್ರಶೇಖರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಘೋಷಿಸುವ ಉದ್ದೇಶದಿಂದ ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.


ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಕಡೆಕ್ಷಣದಲ್ಲಿ ಬಿಜೆಪಿ ಬೆಂಬಲ ನೀಡುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.


ಬಿಜೆಪಿಯ ಹಿರಿಯ ನಾಯಕ ದಿವಂಗತ ಅನಂತಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೂ ಟಿಕೆಟ್ ಕೊಡು‌ವುದು ಖಾತರಿಯಾಗಿದೆಯಾದರೂ ಬೆಂಗಳೂರಿನ ಬಿಜೆಪಿ ನಾಯಕರಾದ ಆರ್. ಅಶೋಕ್, ವಿ. ಸೋಮಣ್ಣ, ಸುಬ್ಬಣ್ಣ ಅವರಿಂದ ಮತ್ತೊಮ್ಮೆ ಭರವಸೆ ಪಡೆದುಕೊಂಡು ನಂತರ ಘೋಷಿಸಲು ನಿರ್ಧರಿಸಲಾಗಿದೆ.


ಬೆಂಗಳೂರು ಗ್ರಾಮಾಂತರದ ಸಮಸ್ಯೆ ಬೇರೆ ರೀತಿ ಇದೆ. ಇಲ್ಲಿನ‌ ಪ್ರಭಾವಿ ಸಂಸದ ಡಿ.ಕೆ. ಸುರೇಶ್ ಅವರನ್ನು ಮಣಿಸಲು ಒಕ್ಕಲಿಗ ಸಮುದಾಯದವರೇಯಾದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರೇ ಸೂಕ್ತ ಎನ್ನುವುದು ರಾಜ್ಯ ಬಿಜೆಪಿ ನಾಯಕರ ಅಭಿಮತ. ಆದರೆ ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆ ಸೋತಿರುವ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸಲು ಸಿದ್ದರಿಲ್ಲ. ಬದಲಿಗೆ ಯೋಗೇಶ್ವರ್ ತಮ್ಮ ಪುತ್ರಿ ನಿಶಾ ಯೋಗೇಶ್ವರ್ ಗೆ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಬೇರೆ ಪ್ರಬಲ ಅಭ್ಯರ್ಥಿಗಳಿಲ್ಲದೆ ಪರದಾಡುತ್ತಿರುವ ಬಿಜೆಪಿ ಸಿ.ಪಿ. ಯೋಗೇಶ್ವರ್ ಪುತ್ರಿ ಎನ್ನುವ ಏಕೈಕ ಕಾರಣಕ್ಕೆ ಟಿಕೆಟ್ ಕೊಡಬೇಕಾ, ಆ ಮೂಲಕ ಸಿ.ಪಿ. ಯೋಗೇಶ್ವರ್ ಗೆ ಮಣಿಯಬೇಕಾ ಎಂದು ಮೀನಾ ಮೇಷ ಎಣಿಸುತ್ತಿದೆ.


ಕೋಲರ ಕ್ಷೇತ್ರದಲ್ಲಿ ಕಳೆದ ಎರಡು ಭಾರೀ ಹಾಲಿ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದ ಡಿ.ಎಸ್. ವೀರಯ್ಯ ಮತ್ತು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಛಲವಾದಿ ನಾರಾಯಣಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಈ ಭಾರಿ ಬೋವಿ ಸಮುದಾಯಕ್ಕೆ ಎಲ್ಲೂ ಅವಕಾಶ ನೀಡಿಲ್ಲದ ಕಾರಣಕ್ಕೆ ಕೋಲಾರದಲ್ಲಾದರೂ ಆ ಸಮಾಜದವರಿಗೆ ಟಿಕೆಟ್ ಕೊಡಬೇಕು ಎಂಬ ಲೆಕ್ಕಾಚಾರ ಕೇಳಿಬರುತ್ತಿದ್ದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.


ಚಿಕ್ಕೋಡಿ ಕ್ಷೇತ್ರದಲ್ಲಿ ಕಳೆದ ಭಾರಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಎದುರು ರಮೇಶ್ ಕತ್ತಿ ಕೇವಲ 3,003 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕಡಿಮೆ ಮತಗಳ ಅಂತರದಿಂದ ಸೋತಿದ್ದರಿಂದ ಈ ಭಾರಿ ಮತ್ತೊಂದು ಅವಕಾಶ ಮಾಡಿಕೊಡಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ. ಅವರಿಗೆ ಸಹೋದರ ಮಾಜಿ ಸಚಿವ ಉಮೇಶ್ ಕತ್ತಿ ಬೆಂಬಲವೂ ಇದೆ. ಇನ್ನೊಂದೆಡೆ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಪ್ಪಾ ಸಾಹೀಬ್ ಜೊಲ್ಲೆ ಪರವಾಗಿ ಜಗದೀಶ್ ಶೆಟ್ಟರ್ ಮತ್ತಿತರರು ಲಾಭಿ ಮಾಡುತ್ತಿದ್ದಾರೆ. ಗೊಂದಲ ಬಗೆಹರಿಸಿ ಇಬ್ಬರೊಳಗೊಬ್ಬರಿಗೆ ಮುಂದಿನ ಹಂತದಲ್ಲಿ ಅವಕಾಶ ನೀಡಲಾಗುತ್ತದೆ.


ರಾಯಚೂರಿನಲ್ಲಿ ಅಮರೇಶ್ ನಾಯಕ್ ಮತ್ತು ಅನಂತರಾಜ್ ನಾಯಕ್ ನಡುವೆ ತೀವ್ರ ಪೈಪೋಟಿ ಇರುವ ಕಾರಣಕ್ಕೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.


ತೀವ್ರ ವಿರೋಧದ ನಡುವೆಯೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಮೈಸೂರಿನ ಪ್ರತಾಪ ಸಿಂಹ, ದಕ್ಷಿಣ ಕನ್ನಡದ ನಳೀನ್ ಕುಮಾರ್ ಕಟೀಲ್, ಉಡುಪಿ ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ ಮತ್ತು ಬೀದರ್ ಕ್ಷೇತ್ರದ ಸಂಸದ ಭಗವಂತ್ ಖೂಬಾ ಮತ್ತೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಸಂಸದರ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ತಿಳಿದುಬಂದಿದೆ.


ಅಭ್ಯರ್ಥಿಗಳ ಪಟ್ಟಿ


  1. ಬೆಂಗಳೂರು ಉತ್ತರ- ಡಿ.ವಿ. ಸದಾನಂದಗೌಡ

  2. ಬೆಂಗಳೂರು ಕೇಂದ್ರ- ಪಿ.ಸಿ. ಮೋಹನ್

  3. ಚಾಮರಾಜನಗರ -ಶ್ರೀನಿವಾಸಪ್ರಸಾದ್

  4. ಮೈಸೂರು, ಕೊಡಗು -ಪ್ರತಾಪ ಸಿಂಹ

  5. ಹಾಸನ -ಎ. ಮಂಜು

  6. ಉಡುಪಿ, ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ

  7. ದಕ್ಷಿಣ ಕನ್ನಡ -ನಳೀನ್ ಕುಮಾರ್ ಕಟೀಲ್

  8. ಶಿವಮೊಗ್ಗ -ಬಿ.ವೈ. ರಾಘವೇಂದ್ರ

  9. ಉತ್ತರ ಕನ್ನಡ -ಅನಂತಕುಮಾರ್ ಹೆಗಡೆ

  10. ಬೆಳಗಾವಿ - ಸುರೇಶ್ ಅಂಗಡಿ

  11. ವಿಜಾಪುರ- ರಮೇಶ್ ಜಿಗಜಿಣಗಿ

  12. ಬಾಗಲಕೋಟೆ- ಪಿ.ಸಿ. ಗದ್ದೀಗೌಡರ್

  13. ಹಾವೇರಿ- ಶಿವಕುಮಾರ್ ಉದಾಸಿ

  14. ಹುಬ್ಬಳ್ಳಿ ಧಾರವಾಡ- ಪ್ರಹ್ಲಾದ್ ಜೋಷಿ

  15. ದಾವಣಗೆರೆ- ಜಿ.ಎಂ. ಸಿದ್ದೇಶ್ವರ್

  16. ಚಿತ್ರದುರ್ಗ- ಎ. ನಾರಾಯಣಸ್ವಾಮಿ

  17. ಬಳ್ಳಾರಿ- ದೇವೇಂದ್ರಪ್ಪ

  18. ಬೀದರ್- ಭಗವಂತ ಖೂಬಾ

  19. ಕಲ್ಬುರ್ಗಿ- ಉಮೇಶ್ ಜಾಧವ್

  20. ಚಿಕ್ಕಬಳ್ಳಾಪುರ- ಬಚ್ಚೇಗೌಡ

  21. ತುಮಕೂರು- ಜಿ.ಎಸ್. ಬಸವರಾಜು