ದೇಶದ ಬಹುತೇಕ ಕ್ರಾಂತಿಕಾರಿಗಳನ್ನು ಬ್ರಿಟಿಷರಿಗೊಪ್ಪಿಸಿದವರೇ ಕಾಂಗ್ರೆಸಿಗರು: ಬಿಜೆಪಿ ಆಕ್ರೋಶ
ಬಿಕೆ ಹರಿಪ್ರಸಾದ್‍ರವರೇ ಡಿಕೆಶಿ ಯಾವ ಕಾರಣಕ್ಕಾಗಿ ತಿಹಾರ್ ಜೈಲಿಗೆ ಹೋದರು ಎಂಬುದನ್ನೂ ಹೇಳಿ. ಹಾಗೆ ಜೈಲಿಗೆ ಹೋಗಿಬಂದ ಇತರ ಕಾಂಗ್ರೆಸಿಗರ ಬಗ್ಗೆಯೂ ತಿಳಿಸಿ. ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದ ವಿನಯ್ ಕುಲಕರ್ಣಿಯೇ ವಿನಾ ವೀರ ಸಾವರ್ಕರ್ ಅಲ್ಲ ಅಂತಾ ಬಿಜೆಪಿ ಟೀಕಿಸಿದೆ.
ಬೆಂಗಳೂರು: ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋಗಿಲ್ಲ, ಕೊಲೆ ಮಾಡಿ ಜೈಲಿಗೆ ಹೋದವರು ಎಂಬ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. #AntiNationalCongress ಹ್ಯಾಶ್‍ಟ್ಯಾಗ್ ಬಳಸಿ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ನಿರಂತರವಾಗಿ ಸಾವರ್ಕರ್ ನಿಂದೆ ಮಾಡುತ್ತಿರುವ ಕಾಂಗ್ರೆಸ್ ತನ್ನ ಎಲುಬಿಲ್ಲದ ನಾಲಿಗೆಯನ್ನು ಮತ್ತಷ್ಟು ಹರಿಯಬಿಟ್ಟಿದೆ. ಬಿಕೆ ಹರಿಪ್ರಸಾದ್ ಎಂಬ ಇತಿಹಾಸ ಪ್ರಜ್ಞೆಯಿಲ್ಲದ ಶಾಸಕ, ಸಾವರ್ಕರ್ ನಿಂದೆಯ ಭರದಲ್ಲಿ "ಕೊಲೆ ಮಾಡಿ ಜೈಲಿಗೆ ಹೋದವರು" ಎನ್ನುವ ಮೂಲಕ ಸಮಸ್ತ ಕ್ರಾಂತಿಕಾರಿಗಳನ್ನೇ ನಿಂದಿಸಿದ್ದಾರೆ’ ಅಂತಾ ಬಿಜೆಪಿ ಟೀಕಿಸಿದೆ.
‘ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕಾಗಿ ದೇಶಕ್ಕಾಗಿ ಬಲಿದಾನಗೈದ ಕ್ರಾಂತಿಕಾರಿಗಳನ್ನು ಕೊಲೆಗಾರರು ಎನ್ನುತ್ತಿದೆ. ಸೋಜಿಗವೆಂದರೆ ದೇಶದ ಬಹುತೇಕ ಕ್ರಾಂತಿಕಾರಿಗಳನ್ನು ಬ್ರಿಟಿಷರಿಗೊಪ್ಪಿಸಿದವರೇ ಅಂದಿನ ಕೆಲ ಕಾಂಗ್ರೆಸಿಗರು. ಅಂತಹ ಕೆಲ ದ್ರೋಹಿಗಳೇ ನಂತರ ಕಾಂಗ್ರೆಸಿನಿಂದ ಶಾಸಕ-ಸಂಸದರೂ ಆದರು!’ ಎಂದು ಬಿಜೆಪಿ ಆರೋಪಿಸಿದೆ.
ಮಹಾರಾಷ್ಟ್ರ ಸರ್ಕಾರ ವಿರುದ್ಧ ಖಂಡನಾ ನಿರ್ಣಯ ಮಂಡನೆ; ಸದನದ ಒಮ್ಮತ ನಿರ್ಧಾರ
‘ಜೈಲಿಗೆ ಹೋದವರು ಯಾರು? ಯಾಕೆ ಹೋದರು? ಯಾವ ಆಧಾರದಲ್ಲಿ ಹೊರಬಂದರು ಎನ್ನುವುದನ್ನು ಖುದ್ದು ಅನುಭವವಿದ್ದ ಹಾಗೆ ಮಾತಾಡುವ ಬಿಕೆ ಹರಿಪ್ರಸಾದ್‍ರವರೇ ನಿಮ್ಮ ರಾಜ್ಯಾಧ್ಯಕ್ಷ ಡಿಕೆಶಿ ಯಾವ ಕಾರಣಕ್ಕಾಗಿ ತಿಹಾರ್ ಜೈಲಿಗೆ ಹೋದರು ಎಂಬುದನ್ನೂ ಹೇಳಿ. ಹಾಗೆ ಜೈಲಿಗೆ ಹೋಗಿಬಂದ ಇತರ ಕಾಂಗ್ರೆಸಿಗರ ಬಗ್ಗೆಯೂ ತಿಳಿಸಿ. ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದ ವಿನಯ್ ಕುಲಕರ್ಣಿಯೇ ವಿನಾ ವೀರ ಸಾವರ್ಕರ್ ಅಲ್ಲ . ಈ ರಾಜಕಾರಣದ ದುರಂತ ಏನೆಂದರೆ ಕೊತ್ವಾಲನ ತಟ್ಟೆ ಕಾಸಲ್ಲಿ ಜೀವನ ಸಾಗಿಸುತ್ತಿದ್ದವರೆಲ್ಲ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸಾವರ್ಕರ್ ಬಗ್ಗೆ ಮಾತಾಡುತ್ತಿದ್ದಾರೆ.’ ಅಂತಾ ಬಿಜೆಪಿ ಟೀಕಿಸಿದೆ.
ನೆಹರೂ ಕುಟುಂಬದ ಸಕಲ ಸದಸ್ಯರ ಹೆಸರಿಟ್ಟು ಬದುಕಲು ಇದು ಹಳೆಯ ಭಾರತ ಅಲ್ಲ, ವಿಶ್ವಗುರುವಾಗುತ್ತಿರುವ ಭಾರತ ಎಂಬುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು, ಬದುಕು ಸವೆಸಿದವರನ್ನು ಸ್ಮರಿಸುವ ಕಾಲದ ಭಾರತ. ಸೋಲನ್ನೊಪ್ಪಿಕೊಳ್ಳುವ ಭಾರತವಲ್ಲ, ಗೆಲುವಿನ ಹೊಸ್ತಿಲಲ್ಲಿರುವ ಭಾರತ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: "ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.