ಬೆಂಗಳೂರು: ರಾಜ್ಯ ರಾಜಕೀಯ ಅಸ್ಥಿರತೆ ಈಗ ನಿರ್ಣಾಯಕ ಹಂತ ತಲುಪಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಕೂಡಲೇ ವಿಶ್ವಾಸ ಮತ ಯಾಚನೆ ಮಾಡಬೇಕು. ಇಲ್ಲವಾದರೆ ನಾವು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುತ್ತೇವೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಬಿಗ್ ಶಾಕ್ ನೀಡಿದೆ. 


COMMERCIAL BREAK
SCROLL TO CONTINUE READING

ಮಾಜಿ ಕಾನೂನು ಮಂತ್ರಿ ಸುರೇಶ್ ಕುಮಾರ್, ಮಾಜಿ ಸ್ಪೀಕರ್ ಬೋಪಯ್ಯ ಹಾಗೂ ಮಾಧುಸ್ವಾಮಿ ಅವರನ್ನೊಳಗೊಂಡ ಬಿಜೆಪಿ ನಿಯೋಗ ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಪತ್ರವನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು. ಇಲ್ಲವಾದರೆ ಸರ್ಕಾರವನ್ನೇ ವಿಸರ್ಜಿಸಿ. ಒಂದು ವೇಳೆ ವಿಶ್ವಾಸಮತ ಯಾಚನೆ ಮಾಡದಿದ್ದಲ್ಲಿ ನಾವೇ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸದನ ಕಲಾಪ ಸಲಹಾ ಸಮಿತಿ ಸಭೆ ಕರೆಯುವಂತೆಯೂ ಬಿಜೆಪಿಯವರು ಒತ್ತಾಯಿಸಿದ್ದಾರೆ.


ಸ್ಪೀಕರ್ ಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಎಎನ್ಐ ಜೊತೆ ಮಾತನಾಡಿದ ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶ ಕುಮಾರ್ ಅವರು, "ಬಹುಮತವನ್ನು ಹೊಂದಿರುವ ಬಗ್ಗೆ ರಾಜ್ಯಕ್ಕೆ ಸಾಬೀತುಪಡಿಸುವುದು ಕರ್ನಾಟಕ ಸಿಎಂ ಕುಮಾರಸ್ವಾಮಿಗೆ ಬಿಟ್ಟದ್ದು. ವಿಶ್ವಾಸಮತ ಯಾಚನೆಗೆ ಅವರೇ ಸಮಯ ನಿಗದಿ ಮಾಡಲು ಸ್ಪೀಕರ್ ಅವರಲ್ಲಿ ಕೇಳಿಕೊಂಡಿದ್ದಾರೆ. ಅದನ್ನು ಮೊದಲು ಮಾಡಬೇಕು, ನಂತರ ಇತರ ವ್ಯವಹಾರಗಳನ್ನು ಮುಂದುವರಿಸಬಹುದು. ನಮ್ಮ ಎಲ್ಲಾ 105 ಶಾಸಕರು ಒಟ್ಟಿಗೆ ಇದ್ದಾರೆ" ಎಂದು ಹೇಳಿದ್ದಾರೆ.