ನವದೆಹಲಿ: ಪಕ್ಷದ ಶಿಸ್ತನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಎಲ್ಲ ಸಂಸತ್ ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ಈ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ತರಬೇತಿ ಕಾರ್ಯಕ್ರಮದ ವೇಳಾಪಟ್ಟಿಯನ್ನು ಬಿಜೆಪಿಯ ಎಲ್ಲಾ ಸಂಸದರಿಗೆ ಭಾನುವಾರ ಕಳುಹಿಸಲಾಗಿದೆ. ಸಂಸದರು ಪಕ್ಷದ ನಾಯಕರೊಂದಿಗೆ ಅವರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳುವಂತೆ ಕೇಳಲಾಯಿತು. ಈ ತರಬೇತಿ ಕಾರ್ಯಕ್ರಮ ಆಗಸ್ಟ್ 3 ಮತ್ತು ಆಗಸ್ಟ್ 4 ರಂದು ನಡೆಯಲಿದ್ದು, ಇದನ್ನು "ಅಭ್ಯಾಸ್ ವರ್ಗ" ಎಂದು ಕರೆಯಲಾಗಿದೆ. 


ಈ ನಿಟ್ಟಿನಲ್ಲಿ ಎಲ್ಲಾ ಸಂಸದರಿಗೆ ಪಕ್ಷದ ಸಂಸದೀಯ ಕಚೇರಿಯಿಂದ ಸಂದೇಶ ಕಳುಹಿಸಲಾಗಿದ್ದು, ಶನಿವಾರ ಮತ್ತು ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಹಾಜರಾಗುವಂತೆ ಕೋರಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ. 


ಇತ್ತೀಚೆಗೆ ನಡೆದ ಸಂಸದೀಯ ಪಕ್ಷದ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹಾಜರಾತಿ ವಿಚಾರವಾಗಿ ಸಂಸತ್ ಸದಸ್ಯರಿಗೆ ಸಂದೇಶ ರವಾನಿಸಿದ್ದಾರೆ. ಕಠಿಣ ಸಂದೇಶದಲ್ಲಿ, ಬಿಜೆಪಿ ಸಂಸದರು ಸದನದ ವೇಳೆ ಕಡ್ಡಾಯವಾಗಿ ಹಾಜರಿರಲು ಪ್ರಧಾನಿ ಸೂಚಿಸಿದರು.


ಈ ನಿಟ್ಟಿನಲ್ಲಿ ದೈನಂದಿನ ವರದಿಯನ್ನು ಸಿದ್ಧಪಡಿಸುವಂತೆ ಅವರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ನಿರ್ದೇಶನ ನೀಡಿದರು. ಪ್ರತಿದಿನ ಸಂಜೆ ಎಲ್ಲ ಸಂಸದರ ಹಾಜರಾತಿ ಕುರಿತು ವರದಿ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಪ್ರಹ್ಲಾದ್ ಜೋಷಿಯವರಿಗೆ ತಿಳಿಸಿದರು.