ಬೆಂಗಳೂರು: ಮಂಗಳವಾರ ಬೆಳಿಗ್ಗೆ 9 ಗಂಟೆ ಬಳಿಕ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ಮೆಟ್ರೋ ರೈಲುಗಳು ಸಂಚರಿಸಿದ್ದು, ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿವರೆಗೆ ಮೆಟ್ರೋ ರೈಲು ಸಂಚಾರ ಪುನರಾರಂಭಗೊಂಡಿತು.


COMMERCIAL BREAK
SCROLL TO CONTINUE READING

ನಿನ್ನೆ ರಾತ್ರಿ ಮೆಟ್ರೋ ನಿಗಮದ ಸಿಬ್ಬಂದಿ ಪ್ರಾಯೋಗಿಕ ಸಂಚಾರ ನಡೆಸಿ ಮಾರ್ಗದ ಸುರಕ್ಷತೆಯನ್ನು ಖಾತರಿ ಪಡೆಸಿಕೊಂಡಿದ್ದರು. ನಂತರ ಇಂದು ಮಧ್ಯಾಹ್ನದ 1 ಗಂಟೆಯ ನಂತರ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿತ್ತು. ಆದರೆ, ಸುರಕ್ಷಿತ ಖಾತ್ರಿಯಾದ  ಕಾರಣ ಬೆಳಗ್ಗೆಯಿಂದಲೂ  ರೈಲುಗಳನ್ನು ಓಡಿಸಲಾಗುತ್ತಿದೆ.


ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಪಿಲ್ಲರ್ ಬೀಮ್‌(ವಯಾಡಕ್ಟ್)ನಲ್ಲಿ ಬಿರುಕು ಬಿಟ್ಟಿದ್ದ ಕಾರಣ ನಡೆಯುತ್ತಿದ್ದ  ದುರಸ್ತಿ ಕಾಮಗಾರಿಯ ವೇಗವನ್ನು ಹೆಚ್ಚಿಸಲು ಬಿಎಂಆರ್‌ಸಿ ಇಂದಿರಾ ನಗರ-ಮಹಾತ್ಮಾ ಗಾಂಧಿ ರಸ್ತೆ ವರೆಗಿನ ಮೆಟ್ರೋ ಸಂಚಾರವನ್ನು ಡಿಸೆಂಬರ್ 28 ರಿಂದ  ನಿನ್ನೆಯವರೆಗೂ ಸ್ಥಗಿತಗೊಳಿಸಿತ್ತು.


ನೇರಳೆ ಮಾರ್ಗದಲ್ಲಿ ಮಾರ್ಗದ ಸುರಕ್ಷತಾ ಪರೀಕ್ಷೆ ನಡೆಯುತ್ತಿದೆ. ನಗರದಲ್ಲಿ  ಉಳಿದೆಲ್ಲ ಪಿಲ್ಲರ್ ಹಾಗೂ ವಯಾಡಕ್ಟ್ ಗಳ ತಾಂತ್ರಿಕ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೆಟ್ರೋ ನಿಗಮದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ ಚೌಹಾಣ್ ತಿಳಿಸಿದ್ದಾರೆ.


ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್  ಮೇಲೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ನಿಗಾ ವಹಿಸಲಿದೆ. ಈ ಪಿಲ್ಲರ್ ವಯಾಡಕ್ಟ್ ಪ್ರದೇಶದಲ್ಲಿ 27 ಸೆನ್ಸರ್ ಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ  ವಯಾಡಕ್ಟ್ ಹಾಗೂ ಅದರ ಬಾಳಿಕೆ ಸಾಮರ್ಥ್ಯವನ್ನು ಅಳೆಯಲಾಗುವುದು ಎಂದು ಬಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ.