ಜುಲೈನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಆದೇಶಗಳನ್ನು ತಡೆಯಿರಿ: ಮುಖ್ಯ ಕಾರ್ಯದರ್ಶಿಗೆ ಬಿಎಸ್ವೈ ಸೂಚನೆ
ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬಿ.ಎಸ್. ಯಡಿಯೂರಪ್ಪ ಸೂಚನೆ.
ಬೆಂಗಳೂರು: ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಆದೇಶಗಳನ್ನು ತಡೆಯಿರಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರಿಗೆ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲೇ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್, ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಮಾನ್ಯ ನಿಯೋಜಿತ ಮುಖ್ಯಮಂತ್ರಿಗಳು ಜುಲೈ-2019ರ ಮಾಹೆಯಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಹೊಸ ಕಾಮಗಾರಿಗಳಿಗೆ ಸಂಬಂಧಿಟ ಆದೇಶಗಳನ್ನು ತಕ್ಷಣವೇ ಮುಂದಿನ ಪರಿಶೀಲನೆ ಆಗುವವರೆಗೆ ತಡೆ ಹಿಡಿಯುವಂತೆ ಸರ್ಜಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲು ಸೂಚಿಸಿರುತ್ತಾರೆ.
ಮುಂದುವರೆದು, ಮಾನ್ಯ ನಿಯೋಜಿತ ಮುಖ್ಯಮಂತ್ರಿಗಳು ಜುಲೈ-2019ರ ಮಾಹೆಯಲ್ಲಿ ವರ್ಗಾವಣೆಗೆ ಸಂಬಂಧಿಸಿದ ಪ್ರಸ್ತಾವಗಳ ಮೇಲೆ ಅನುಮೊದನೆಗೊಂದು, ಜಾರಿಯಾಗದೆ ಇರುವ ಆದೇಶಗಳನ್ನು ಮುಂದಿನ ಆದೇಶದವರೆಗೆ ಜಾರಿ ಮಾಡದಂತೆ ಹಾಗೂ ಈಗಾಗಲೇ ಹೊರಡಿಸಿರುವ, ಆದರೆ ಚಾಲೆಂಗೊಲ್ಲದಿರುವ ವರ್ಗಾವಣೆ ಸಂಬಂಧಿತ ಪ್ರಸ್ತಾವಗಳ ಮೇಲಿನ ಆದೇಶಗಳನ್ನು ಮುಂದಿನ ಆದೇಶದವರೆಗೆ ಚಾಲನೆಗೊಲಿಸದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲು ಸೂಚಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ, ಮಾನ್ಯ ನಿಯೋಜಿತ ಮುಖ್ಯಮಂತ್ರಿಗಳ ನಿರ್ದೇಶನಗಳನ್ನು ಪಾಲಿಸಲು ಕೋರಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಎಲ್ಲಾ ಇಲಾಖೆಗಳಿಗೆ ಸೂಚಿಸಿದ್ದಾರೆ.